ಕರುನಾಡಿನಲ್ಲಿ ಹುಟ್ಟಬೇಕಾದರೇ ಏಳೇಳು ಜನ್ಮದ ಪುಣ್ಯ ಮಾಡಿರಬೇಕು – ಬಸವರಾಜ್ ಬೊಮ್ಮಾಯಿ..
ನಾಡಿನಾದ್ಯಂತ ಇಂದು 67ನೇ ಕನ್ನಡ ರಾಜ್ಯೋತ್ಸವವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತಿದೆ. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪ್ರಧಾನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಧ್ವಜಾರೋಹಣ ನೆರವೇರಿಸಿದರು.
ಬಳಿಕ ಮಾತನಾಡಿದ ಬಸವರಾಜ ಬೊಮ್ಮಾಯಿ, ಕನ್ನಡ ನಾಡು ಪುಣ್ಯದ ಬೀಡು, ಕರುನಾಡಿನಲ್ಲಿ ಹುಟ್ಟಬೇಕಾದರೆ ಏಳೇಳು ಜನ್ಮದದಲ್ಲಿ ಪುಣ್ಯ ಮಾಡಿರಬೇಕು ಎಂದು ಹೇಳಿದರು. ವೆಂಕಟರಾಯರು ಕರ್ನಾಟಕ ಏಕೀಕರಣಕ್ಕೆ ನಾಂದಿ ಹಾಡಿದ್ದು, ಈ ಹೋರಾಟದಲ್ಲಿ ಹಿರಿಯರಾದ ನಿಜಲಿಂಗಪ್ಪ, ಕುವೆಂಪು ಅವರಂತಹ ಮಹಾನ್ ಪುರುಷರು ಪಾಲ್ಗೊಂಡು ನಮಗೆಲ್ಲರಿಗೂ ಸಮೃದ್ಧ ಕರ್ನಾಟಕದ ಕೊಡುಗೆ ನೀಡಲು ಕಾರಣರಾಗಿದ್ದಾರೆ ಎಂದರು.
ಕರ್ನಾಟಕ ರಾಜ್ಯ ಇಂದು ಶಿಕ್ಷಣ, ಆರೋಗ್ಯ, ಉದ್ಯೋಗ, ವಾಣಿಜ್ಯ, ಕೈಗಾರಿಕೆಯಂತಹ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದು, ಭಾರತ ದೇಶದ ಭವಿಷ್ಯವನ್ನು ಬರೆಯುವಂತಹ ಶಕ್ತಿಯನ್ನು ಹೊಂದಿದೆ ಎಂದು ಹೇಳಿದರು.
ನಮ್ಮ ರಾಜ್ಯದಲ್ಲಿ ಬುದ್ಧಿವಂತಿಕೆಗೆ ಯಾವುದೇ ಕೊರತೆಯಿಲ್ಲ. ಕನ್ನಡ ನಾಡು ಜ್ಞಾನದ ಬೀಡಾಗಿದ್ದು,ಇಂದಿಗೂ ಅಂತಃಕರಣವನ್ನು ಉಳಿಸಿಕೊಂಡು ಅಭಿವೃದ್ಧಿ ಪಥದತ್ತ ಸಾಗಿದೆ . ಪ್ರಸ್ತುತದ ಸನ್ನಿವೇಶದಲ್ಲಿ ಸುಂದರ ನಾಡನ್ನು ಕಟ್ಟುವ ಸಂಕಲ್ಪವನ್ನು ಪ್ರತಿಯೊಬ್ಬ ಕನ್ನಡಿಗನೂ ಮಾಡಬೇಕಿದೆ. ಈ ಮೂಲಕ ಒಗ್ಗಟ್ಟಾಗಿ ಭವಿಷ್ಯದ ಸವಾಲುಗಳನ್ನು ಎದುರಿಸಲು ಸಜ್ಜಾಗಬೇಕಿದೆ ಎಂದರು.
ಎಲ್ಲ ಕ್ಷೇತ್ರಗಳಲ್ಲಿಯೂ ಕನ್ನಡ ಬಳಕೆಯನ್ನು ಕಡ್ಡಾಯ ಮಾಡುವ ದಿಟ್ಟ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ಹೇಳಿದರು.
karnataka rajyotsava – Basavaraj bommai