ಇನ್ನೆರಡು ದಿನದಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶ
ಬೆಂಗಳೂರು : ಇನ್ನೆರಡು ದಿನದಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟವಾಗುವ ಸಾಧ್ಯತೆಗಳಿವೆ. ಈ ಹಿಂದೆ ಶಿಕ್ಷಣ ಸಚಿವರಾಗಿದ್ದ ಎಸ್ ಸುರೇಶ್ ಕುಮಾರ್ ಅವರು, ಆಗಸ್ಟ್ 10ರ ಒಳಗೆ 2020-21ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಲಾಗುವುದು ಎಂದು ಮಾಹಿತಿ ನೀಡಿದ್ದರು.
ಇಂದು ಫಲಿತಾಂಶ ಪ್ರಕಟಿಸುವ ಬಗ್ಗೆ ಶಿಕ್ಷಣ ಇಲಾಖೆ ಸಭೆ ನಡೆಸುತ್ತಿದ್ದು, ಸಭೆಯಲ್ಲಿ ಯಾವಾಗ ಫಲಿತಾಂಶ ಪ್ರಕಟಿಸಬೇಕು ಎಂಬುವುದು ನಿರ್ಧಾರವಾಗಲಿದೆ. ಮೂಲಗಳ ಪ್ರಕಾರ ಆಗಸ್ಟ್ 7ರಂದು ಫಲಿತಾಂಶ ಘೋಷಣೆ ಬಹುತೇಕ ಪಕ್ಕಾ ಎಂದು ಹೇಳಲಾಗುತ್ತಿದೆ.
ಈಗಾಗಲೇ ಮೌಲ್ಯಮಾಪನ ಕಾರ್ಯ ಪೂರ್ಣವಾಗಿದ್ದು, ಫಲಿತಾಂಶ ಪ್ರಕಟಿಸಲು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಸಕಲ ಸಿದ್ಧತೆ ಮಾಡಿಕೊಂಡಿದೆ. ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಆದೇಶ ಬರುತ್ತಿದ್ದಂತೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟವಾಗಲಿದೆ.
ಕೊರೊನಾ ಆತಂಕದ ನಡುವೆ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಜುಲೈ 19 ಹಾಗೂ 22ರಂದು ಎರಡೇ ದಿನಗಳಲ್ಲಿ ಪರೀಕ್ಷೆಯನ್ನು ನಡೆಸಿತ್ತು. ಒಂದು ದಿನದಲ್ಲಿ ಮೂರು ಪರೀಕ್ಷೆಗಳಂತೆ ಎರಡು ದಿನಗಳಲ್ಲಿ ಆರು ವಿಷಯಗಳ ಪರೀಕ್ಷೆಯನ್ನು ನಡೆಸಲಾಗಿತ್ತು. ಪ್ರತಿ ವಿಷಯಕ್ಕೆ 40 ಅಂಕಗಳ ಪ್ರಶ್ನೆಗಳನ್ನು ನೀಡಲಾಗಿತ್ತು.