ಕೇಂದ್ರ ಮಾಜಿ ಸಚಿವ ಪಿ ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರಿಗೀಗ ಸಂಕಷ್ಟ ಎದುರಾಗಿದೆ.. ಹೌದು ಲಂಚ ಪಡೆದು ನಿಯಮಗಳನ್ನು ಮೀರಿ ಚೀನಾ ಪ್ರಜೆಗಳಿಗೆ ವೀಸಾ ಕೊಡಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಸಂಸದ ಕಾರ್ತಿ ಚಿದಂಬರಂ ಅವರ ಆಪ್ತ ಎಸ್. ಭಾಸ್ಕರ ರಾಮನ್ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.
ಈ ಸಂಬಂಧ ಕಾರ್ತಿ ಚಿದಂಬರಂ ಮತ್ತು ಇತರರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿತ್ತು. ಮಂಗಳವಾರ, ತನಿಖಾ ಸಂಸ್ಥೆಯು ಕೇಂದ್ರದ ಮಾಜಿ ಗೃಹ ಸಚಿವ ಪಿ.ಚಿದಂಬರಂ ಅವರ ಮನೆ ಸೇರಿದಂತೆ ದೇಶದಾದ್ಯಂತ 10 ಸ್ಥಳಗಳಲ್ಲಿ ದಾಳಿ ನಡೆಸಿತ್ತು. ಕಾರ್ತಿ ಚಿದಂಬರಂ, ಭಾಸ್ಕರ್ ರಾಮನ್ , ಖಾಸಗಿ ಸಂಸ್ಥೆ ಸೇರಿದಂತೆ ಇತರರನ್ನು ಆರೋಪಿಗಳೆಂದು ಹೆಸರಿಸಲಾಗಿದೆ ಎಂದು ವರದಿಯಾಗಿದೆ..
ಪಂಜಾಬ್ ನ ಮಾನ್ಸಾ ಮೂಲದ ಖಾಸಗಿ ಸಂಸ್ಥೆ, ತಲ್ವಾಂಡಿ ಸಾಬೋ ಪವರ್ ಲಿಮಿಟೆಡ್ ಯೋಜನೆಯನ್ನು ನಿಗದಿತ ಸಮಯದೊಳಗೆ ಮುಗಿಸಲು ಮುಂದಾಗಿದ್ದಾಗ ಚೀನಾದ ಪ್ರಜೆಗಳನ್ನು ಕರೆಸಿಕೊಳ್ಳಲು ಅವರಿಗೆ ನಿಯಮ ಮೀರಿ ವೀಸಾ ಕೊಡಿಸಲು ಮಧ್ಯವರ್ತಿಗಳನ್ನು ಬಳಸಿಕೊಂಡು 50 ಲಕ್ಷ ರೂಪಾಯಿ ಪಾವತಿ ಮಾಡಿದೆ ಎಂದು ಆರೋಪಿಸಲಾಗಿದೆ.