ಕಾಸರಗೋಡು : ಕೋವಿಡ್ 19 ಬಾಧಿಸಿ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಯಲ್ಲಿದ್ದ 178 ಸೋಂಕಿತರೂ ಗುಣಮುಖರಾಗಿ ಬಿಡುಗಡೆ ಹೊಂದಿದ್ದು, ಜಿಲ್ಲೆ ಕೋವಿಡ್ ಮುಕ್ತವಾಗಿದೆ. ಜಿಲ್ಲೆಯಲ್ಲಿದ್ದ ಒಟ್ಟು 178 ರೋಗಿಗಳಲ್ಲಿ 177 ಮಂದಿ ಈ ಹಿಂದೆಯೇ ಗುಣಮುಖರಾಗಿ ತೆರಳಿದ್ದರು. ಉಕ್ಕಿನಡ್ಕದ ಕಾಸರಗೋಡು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಕೊನೆಯ ವ್ಯಕ್ತಿ ಗುಣಮುಖರಾಗಿ ಬಿಡುಗಡೆಗೊಳ್ಳುವ ಮೂಲಕ ಕಾಸರಗೋಡು ಶೇ.100 ಕೋವಿಡ್ ಮುಕ್ತ ಜಿಲ್ಲೆಯಾಗಿದೆ. ರಾಜ್ಯದಲ್ಲಿ ಕೋವಿಡ್ 19 ಸೋಂಕಿನ ಪ್ರತಿರೋಧ ಚಟುವಟಿಕೆಗಳ ಎರಡನೇ ಹಂತ ಆರಂಭಿಸಿದ ವೇಳೆ ಜಿಲ್ಲೆ ತಲ್ಲಣಗೊಂಡಿತ್ತು. ಸಾಮಾಜಿಕ ಹರಡುವಿಕೆಯ ಸಾಧ್ಯತೆಗಳ ಭೀತಿ ಎಲ್ಲೆಡೆ ಕಂಡುಬರುತ್ತಿತ್ತು. ಆದರೆ ಎಲ್ಲ ವಲಯಗಳ ಸಹಕಾರ, ಜನಜಾಗೃತಿಯಿಂದ ಜಿಲ್ಲೆ ಅಪೂರ್ವ ಸಾಧನೆ ಮಾಡಿದೆ. ಈ ಮಧ್ಯೆ ಕೇರಳದಲ್ಲಿ ಭಾನುವಾರ ಕೋವಿಡ್-19 ವೈರಸ್‌ನ ಏಳು ಹೊಸ ಪ್ರಕರಣ ಪತ್ತೆಯಾಗಿದೆ.








