ಕೊರೋನಾ ಸೋಂಕಿಗೆ ಒಳಗಾದ ಮಕ್ಕಳಲ್ಲಿ ಕಾಣಿಸಿಕೊಂಡ ಕವಾಸಕಿ
ಮುಂಬೈ, ಜುಲೈ 24: ಕೊರೊನಾ ಸೋಂಕಿಗೆ ಒಳಗಾಗಿ ಮುಂಬೈನ ವಾಡಿಯಾ ಮಕ್ಕಳ ಆಸ್ಪತ್ರೆಗೆ ದಾಖಲಾದ ಮಕ್ಕಳಲ್ಲಿ ಕವಾಸಕಿ ಮಾದರಿಯ ರೋಗ ಕಾಣಿಸಿಕೊಂಡಿದೆ.
ಮುಂಬೈನ ವಾಡಿಯ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿಗೆ ಒಳಗಾಗಿ 100 ಮಕ್ಕಳು ದಾಖಲಾಗಿದ್ದು, ಈ ಪೈಕಿ 18 ಮಕ್ಕಳಿಗೆ ಕವಾಸಕಿ ಮಾದರಿಯ ರೋಗ ಕಾಣಿಸಿಕೊಂಡಿದ್ದು, ವೈದ್ಯರ ಆತಂಕಕ್ಕೆ ಕಾರಣವಾಗಿದೆ.

ಮಕ್ಕಳಲ್ಲಿ ಜ್ವರ, ಚರ್ಮದ ಮೇಲೆ ಕೆಂಪನೆಯ ಗುಳ್ಳೆ, ಕಣ್ಣು ಕೆಂಪಾಗುವುದು, ಆಯಾಸ, ಅತಿಭೇದಿ ಇತ್ಯಾದಿ ಕವಾಸಕಿ ರೋಗದ ಲಕ್ಷಣಗಳಾಗಿದ್ದು, ಸರಿಯಾದ ಸಮಯದಲ್ಲಿ ಸೂಕ್ತ ಚಿಕಿತ್ಸೆ ದೊರೆಯದಿದ್ದರೆ, ಮಕ್ಕಳು ಸಾವಿಗೀಡಾಗುವ ಸಂಭವವಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ವಾಡಿಯಾ ಮಕ್ಕಳ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕಿ ಡಾ| ಶಕುಂತಲಾ ಪ್ರಭು ಈಗಾಗಲೇ ಇಬ್ಬರು ಮಕ್ಕಳು ಈ ರೋಗದಿಂದ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದು, ನಾಲ್ವರು ಮಕ್ಕಳು ಚೇತರಿಕೆ ಕಾಣುತ್ತಿದ್ದಾರೆ ಎಂದು ಹೇಳಿದರು. ಉಳಿದ ಮಕ್ಕಳು ಈಗಾಗಲೇ ಗುಣಮುಖರಾಗಿ ಮನೆಗೆ ತೆರಳಿರುವುದಾಗಿ ತಿಳಿಸಿದರು.








