ಕೇದಾರನಾಥದಲ್ಲಿ ಪ್ರಧಾನಿ ಮೋದಿ: ಶಂಕರಾಚಾರ್ಯರ 12 ಅಡಿ ಎತ್ತರದ ಪ್ರತಿಮೆ ಅನಾವರಣ
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಾಖಂಡದ ಕೇದಾರನಾಥ ಕ್ಷೇತ್ರಕ್ಕೆ ಭೇಟಿ ನೀಡಿ ಶಿವನ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಅದ್ವೈತ ತತ್ವ ಪ್ರತಿಪಾದಕ ಶಂಕರಾಚಾರ್ಯ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದ್ದಾರೆ. ಈ ಪ್ರತಿಮೆ 12 ಅಡಿ ಎತ್ತರವಿದೆ.
ಆದಿ ಗುರು ಶಂಕರಾಚಾರ್ಯ ಅವರ ಸಮಾಧಿಯ ಪುನರ್ ನಿರ್ಮಾಣವಾಗಿದ್ದು, ಅಲ್ಲಿ ಶಂಕರಾಚಾರ್ಯರ 12 ಅಡಿ ಎತ್ತರದ ಪ್ರತಿಮೆ ಅನಾವರಣ ಮಾಡಿದರು. ಇನ್ನೂ ಹಿಮಾಲಯ ಪರ್ವತ ಸಾಲಿನಲ್ಲಿರುವ ಕೇದಾರನಾಥದಲ್ಲಿ ಸುಮಾರು 400 ಕೋಟಿ ರೂಪಾಯಿ ವೆಚ್ಚದ ಪುನರ್ ನಿರ್ಮಾಣ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಿದರು.
ಮೈಸೂರಿನ ಹೆಸರಾಂತ ಶಿಲ್ಪ ಕಲಾಕಾರರು ಈ ಪ್ರತಿಮೆಯನ್ನು ನಿರ್ಮಾಣ ಮಾಡಿರುವುದು ವಿಶೇಷ. ಸಾಂಸ್ಕøತಿಕ ನಗರಿ ಮೈಸೂರಿನ ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದ ಅರುಣ್ ಯೋಗಿರಾಜ್ ಮತ್ತವರ ತಂಡ 9 ತಿಂಗಳ ಅವಧಿಯಲ್ಲಿ ಪ್ರತಿಮೆಯನ್ನು ಸಿದ್ಧಪಡಿಸಿ, ಕೇದಾರನಾಥದಲ್ಲಿ ಅದನ್ನು ಅಳವಡಿಸುವ ಕಾರ್ಯ ಪೂರ್ಣಗೊಳಿಸಿದ್ದಾರೆ.
80 ಟನ್ ಕಲ್ಲನ್ನು ಕೆತ್ತಿ ಅಂತಿಮವಾಗಿ 28 ಟನ್ ನಲ್ಲಿ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿದೆ. ಹಾಸನದ ಬೇಲೂರು, ಹಳೇಬಿಡಿನ ಶಿಲ್ಪಕಲೆಗೆ ಬಳಸಿರುವ ಕೃಷ್ಣ ಶಿಲೆ ಕಲ್ಲನ್ನು ಬಳಸಲಾಗಿದ್ದು, ಮಳೆ, ಬಿಸಿಲು, ಬೆಂಕಿ, ನೀರು ಸೇರಿದಂತೆ ಯಾವುದರಿಂದಲೂ ಹಾನಿಯಾಗುವುದಿಲ್ಲ. 35 ಟನ್ ತೂಕದ ಶಂಕರಾಚಾರ್ಯರ ಪ್ರತಿಮೆ ರೂಪಿಸುವ ಕಾರ್ಯ 2019ರಲ್ಲಿ ಆರಂಭಿಸಲಾಗಿತ್ತು.
ಶಂಕರಾಚಾರ್ಯರ ಪ್ರತಿಮೆ ಅನಾವರಣದ ನಂತರ ಮೋದಿ ಅವರು ಅಲ್ಲಿಯೇ ಕೆಲ ಸಮಯ ಧಾನ್ಯಕ್ಕೆ ಕುಳಿತರು. 2013ರ ಪ್ರವಾಹದಿಂದ ತೀವ್ರ ಹಾನಿಗೆ ಒಳಗಾಗಿದ್ದ ಕೇದಾರನಾಥ ಪ್ರದೇಶವನ್ನು ಪುನರ್ನಿರ್ಮಿಸುವ ಕಾರ್ಯ ಭರದಿಂದ ಸಾಗಿದೆ. ಅಲ್ಲಿನ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದ ವಿವರಗಳನ್ನು ಒಳಗೊಂಡ ಸಾಕ್ಷ್ಯಚಿತ್ರವೊಂದನ್ನು ಮೋದಿ ವೀಕ್ಷಿಸಿದ್ದಾರೆ.