ಅಮಿತ್ ಶಾ ಅವರನ್ನು ಭೇಟಿಯಾದ ಕೇಜ್ರಿವಾಲ್!
ಕೇಜ್ರಿವಾಲ್ ಅವರನ್ನು ಅಭಿನಂದಿಸಿದ ಅಮಿತ್ ಶಾ
ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡ ಕೇಜ್ರಿವಾಲ್
ನವದೆಹಲಿ: ಮೂರನೇ ಬಾರಿಗೆ ದೆಹಲಿ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಅರವಿಂದ್ ಕೇಜ್ರಿವಾಲ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ. ನವದೆಹಲಿಯ ಕೃಷ್ಣ ಮೆನನ್ ಮಾರ್ಗದಲ್ಲಿರುವ ಗೃಹ ಸಚಿವರ ನಿವಾಸಕ್ಕೆ ತೆರಳಿದ ಕೇಜ್ರಿವಾಲ್, ದೆಹಲಿ ಅಭಿವೃದ್ಧಿ ವಿಚಾರವಾಗಿ 20ಕ್ಕೂ ಹೆಚ್ಚು ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ಈ ವೇಳೆ ಅಮಿತ್ ಶಾ ಅವರು ಮೂರನೇ ಬಾರಿಗೆ ಸಿಎಂ ಆದ ಕೇಜ್ರಿವಾಲ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಬಳಿಕ ಈ ಬಗ್ಗೆ ಟ್ವೀಟ್ ಮಾಡಿದ ಕೇಜ್ರಿವಾಲ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜತೆ ನಡೆದ ಚರ್ಚೆ ಫಲಕಾರಿಯಾಗಿದೆ. ದೆಹಲಿ ಎದುರಿಸುತ್ತಿರುವ ಸಂಕೀರ್ಣ ಸಮಸ್ಯೆಗಳ ಬಗ್ಗೆ ಗೃಹ ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಅಲ್ಲದೆ ದೆಹಲಿ ಅಭಿವೃದ್ಧಿಗೆ ಸಹಕಾರ ನೀಡುವಂತೆ ಕೋರಿದೆ. ಇದಕ್ಕೆ ಸ್ಪಂದಿಸಿದ ಗೃಹ ಸಚಿವರು ಅಭಿವೃದ್ಧಿಗೆ ಕೇಂದ್ರ ಸರ್ಕಾರ ಕೈಜೋಡಿಸುತ್ತದೆ ಎನ್ನುವ ಭರವಸೆ ನೀಡಿದರು ಎಂದು ಮಾಹಿತಿ ಹಂಚಿಕೊಂಡಿದ್ದಾರೆ.








