ನವದೆಹಲಿ: ಆಟೋ ಚಾಲಕರಿಗೆ ಆಮ್ ಆದ್ಮಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಬಂಪರ್ ಗಿಫ್ಟ್ ನೀಡಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ವಿಧಾನಸಭಾ ಚುನಾವಣೆಯ ಕಾವು ರಂಗೇರಿದ್ದು, ಚುನಾವಣೆಗೂ ಮುನ್ನವೇ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಆಟೋ ಚಾಲಕರಿಗೆ ಬಂಪರ್ ಗಿಫ್ಟ್ ನೀಡಿದ್ದಾರೆ. ಆಟೋ ಚಾಲಕರಿಗೆ 10 ಲಕ್ಷ ರೂ. ವಿಮೆ, ಪುತ್ರಿಯರ ಮದುವೆಗೆ 1 ಲಕ್ಷ ರೂ. ಸೇರಿದಂತೆ ಹಲವು ಆರ್ಥಿಕ ಪ್ರಯೋಜನಗಳನ್ನು ಘೋಷಿಸಿದ್ದಾರೆ.
ಪೂರ್ವ ದೆಹಲಿಯ ಕೊಂಡ್ಲಿ ಪ್ರದೇಶದಲ್ಲಿ ಆಟೋ ಚಾಲಕರನ್ನು ಭೇಟಿ ಮಾಡಿದ ಸಂದರ್ಭದಲ್ಲಿ 5 ಭರವಸೆ ಘೋಷಿಸಿದ್ದಾರೆ. ಮತ್ತೆ ನಾವು ಅಧಿಕಾರಕ್ಕೆ ಬಂದಾಗ ಈ ಯೋಜನೆಗಳು ಜಾರಿಯಾಗಲಿವೆ ಎಂದಿದ್ದಾರೆ. ಮೊದಲು ಆಟೋ ಚಾಲಕರ ಮಗಳ ಮದುವೆಗೆ ಒಂದು ಲಕ್ಷ ರೂ. ನೀಡುತ್ತೇವೆ. ದೀಪಾವಳಿ ಮತ್ತು ಹೋಳಿ ಹಬ್ಬದಂದು ಆಟೋ ಚಾಲಕರಿಗೆ ಸಮವಸ್ತ್ರ ಪಡೆಯಲು ತಲಾ 2500 ರೂ., ಪ್ರತಿ ಆಟೋ ಚಾಲಕನಿಗೆ 10 ಲಕ್ಷ ರೂ. ಜೀವ ವಿಮೆ, 5 ಲಕ್ಷ ರೂ. ಅಪಘಾತ ವಿಮೆ, ಆಟೋ ಚಾಲಕರ ಮಕ್ಕಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸರ್ಕಾರದಿಂದ ಶುಲ್ಕ ನೀಡಲಾಗುವುದು ಎಂಬ ಭರವಸೆ ನೀಡಿದ್ದಾರೆ.