ಲಸಿಕೆ ಪ್ರಮಾಣ ಪತ್ರದ ಮೇಲೆ ಮೋದಿ ಚಿತ್ರ : ಪ್ರಶ್ನಿಸಿದ್ದ ಅರ್ಜಿ ವಜಾ, ದಂಡ ವಿಧಿಸಿದ ಕೋರ್ಟ್
ಕೇರಳ : ಕೋವಿಡ್ ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರ ಇರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ವಜಾಗೊಳಿಸಿದೆ. ಅಲ್ಲದೇ ಇದೊಂದು ದುರುದ್ದೇಶದಿಂದ ಸಲ್ಲಿಕೆಯಾದ ಕ್ಷುಲ್ಲಕ ಅರ್ಜಿ ಎಂದು ಅರ್ಜಿದಾರನಿಗೆ ದಂಡ ವಿಧಿಸಿದೆ.. ಅರ್ಜಿದಾರರಿಗೆ ರಾಜಕೀಯ ಅಜೆಂಡಾ ಕೂಡ ಇದೆ ಎಂಬ ಬಲವಾದ ಅನುಮಾನವಿದೆ. ನನ್ನ ಪ್ರಕಾರ ಇದು ಪ್ರಚಾರ ಪಡೆಯುವ ಸಲುವಾಗಿ ಸಲ್ಲಿಸಲಾಗಿದ್ದ ಅರ್ಜಿ. ಆದ್ದರಿಂದ ಈ ಅರ್ಜಿಯು ಭಾರಿ ಮೊತ್ತದ ದಂಡದೊಂದಿಗೆ, ವಜಾಗೊಳ್ಳಲು ಅರ್ಹವಾಗಿದೆ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.
ವ್ಯಕ್ತಿಯೊಬ್ಬರು ಹಣ ಕೊಟ್ಟು ಲಸಿಕೆ ಪಡೆದ ಮೇಲೆ ಸರ್ಕಾರವು ಪ್ರಧಾನಿಯ ಫೋಟೊವನ್ನು ಪ್ರಮಾಣ ಪತ್ರದ ಮೇಲೆ ಮುದ್ರಿಸಿ, ಹೆಗ್ಗಳಿಕೆ ಪಡೆಯುವ ಅವಕಾಶಗಳು ಇರುವುದಿಲ್ಲ ಎಂದು ಅರ್ಜಿದಾರರ ಪರ ವಕೀಲರು ಪ್ರತಿಪಾದಿಸಿದ್ದರು. ಈ ತಿಂಗಳ ಆರಂಭದಲ್ಲಿ ಈ ಅರ್ಜಿ ವಿಚಾರಣೆಗೆ ಬಂದಿತ್ತು. ಲಸಿಕೆ ಪ್ರಮಾಣಪತ್ರಗಳಲ್ಲಿ ಮೋದಿಯವರ ಫೋಟೋ ಇರುವುದಕ್ಕೆ ಏಕೆ ನಾಚಿಕೆಪಡುತ್ತೀರಿ ಎಂದು ನ್ಯಾಯಮೂರ್ತಿಗಳು ಅರ್ಜಿದಾರರನ್ನು ಪ್ರಶ್ನಿಸಿ, ನೀವು ನ್ಯಾಯಾಂಗದ ಸಮಯ ಹಾಳು ಮಾಡುತ್ತಿದ್ದೀರಿ ಎಂದು ಅಭಿಪ್ರಾಯ ಪಟ್ಟಿದ್ದು ದಂಡ ವಿಧಿಸಿದ್ದಾರೆ..