ಬೆಂಗಳೂರು: ಉತ್ತರ ಭಾರತದ ರಾಜ್ಯಗಳಲ್ಲಿ, ವಿಶೇಷವಾಗಿ ಉತ್ತರ ಪ್ರದೇಶದಲ್ಲಿ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ನಡೆಸಲಾಗುವ ಬುಲ್ಡೋಜರ್ ಕಾರ್ಯಾಚರಣೆಯ ಅಮಾನವೀಯ ಸಂಸ್ಕೃತಿ ಇದೀಗ ದಕ್ಷಿಣ ಭಾರತದ ಕರ್ನಾಟಕಕ್ಕೂ ಕಾಲಿಟ್ಟಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಯಲಹಂಕದ ಕೋಗಿಲು ಲೇಔಟ್ ಬಳಿಯಿರುವ ಮುಸ್ಲಿಂ ಬಾಹುಳ್ಯದ ಫಕೀರ್ ಕಾಲೋನಿ ಮತ್ತು ವಸೀಮ್ ಬಡಾವಣೆಯಲ್ಲಿ ಬಡವರ ನೂರಾರು ಮನೆಗಳನ್ನು ನೆಲಸಮಗೊಳಿಸಿದ ಘಟನೆಯನ್ನು ಖಂಡಿಸಿರುವ ಅವರು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಬುಲ್ಡೋಜರ್ ನ್ಯಾಯ ಎನ್ನುವ ಅಪಾಯಕಾರಿ ಪ್ರವೃತ್ತಿಯನ್ನು ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಕ್ಷಿಣಕ್ಕೂ ವ್ಯಾಪಿಸಿದ ದ್ವೇಷ ರಾಜಕಾರಣದ ಛಾಯೆ
ತಮ್ಮ ಫೇಸ್ ಬುಕ್ ಖಾತೆಯಲ್ಲಿ ಈ ಬಗ್ಗೆ ಸುದೀರ್ಘವಾಗಿ ಬರೆದುಕೊಂಡಿರುವ ಕೇರಳ ಸಿಎಂ, ಉತ್ತರ ಭಾರತದಲ್ಲಿ ಸಂಘಪರಿವಾರವು ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ನಡೆಸುತ್ತಿದ್ದ ರಾಜಕೀಯ ದಾಳಿಗಳು ಮತ್ತು ಬುಲ್ಡೋಜರ್ ರಾಜ್ ಇದೀಗ ದಕ್ಷಿಣದ ರಾಜ್ಯಗಳಿಗೂ ಹರಡುತ್ತಿದೆ ಎಂಬುದಕ್ಕೆ ಈ ಘಟನೆಯೇ ಪ್ರತ್ಯಕ್ಷ ಸಾಕ್ಷಿಯಾಗಿದೆ. ಒಂದು ಸಮುದಾಯವನ್ನು ಗುರಿಯಾಗಿಸಿ ನಡೆಸುವ ಇಂತಹ ಕಾರ್ಯಾಚರಣೆಗಳು ಜಾತ್ಯತೀತ ಮೌಲ್ಯಗಳಿಗೆ ವಿರುದ್ಧವಾದದ್ದು ಎಂದು ಕಿಡಿಕಾರಿದ್ದಾರೆ.
ನಡುಗುವ ಚಳಿಯಲ್ಲಿ ಬೀದಿಪಾಲಾದ ಬಡ ಕುಟುಂಬಗಳು
ಯಾವುದೇ ಪರ್ಯಾಯ ವ್ಯವಸ್ಥೆಯಿಲ್ಲದೆ, ತೀವ್ರ ಚಳಿಯ ನಡುವೆಯೂ ಇಡೀ ಕುಟುಂಬಗಳನ್ನು ಅವರ ಮನೆಗಳಿಂದ ಬಲವಂತವಾಗಿ ಹೊರಹಾಕಿ, ಮನೆಗಳನ್ನು ಧ್ವಂಸಗೊಳಿಸಿ ಬೀದಿಗೆ ತಳ್ಳಲಾಗಿದೆ. ಅಲ್ಲಿನ ನಿವಾಸಿಗಳಿಗೆ ದಿಕ್ಕು ತೋಚದಂತ ಸ್ಥಿತಿ ನಿರ್ಮಾಣವಾಗಿದೆ. ಮಾನವೀಯತೆಯನ್ನೇ ಮರೆತು ಕರ್ನಾಟಕದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಈ ವಿಚಾರದಲ್ಲಿ ಕ್ರೂರವಾಗಿ ವರ್ತಿಸಿದೆ ಮತ್ತು ಬುಲ್ಡೋಜರ್ ನ್ಯಾಯವನ್ನು ಜಾರಿಗೆ ತಂದಿದೆ ಎಂದು ಪಿಣರಾಯಿ ವಿಜಯನ್ ಗಂಭೀರ ಆರೋಪ ಮಾಡಿದ್ದಾರೆ.
ಸಾಮಾಜಿಕ ನ್ಯಾಯದ ಹರಿಕಾರರಿಗೆ ಇದು ಶೋಭೆಯೇ?
ತಮ್ಮದು ಬಡವರ ಪರ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ನಿಲ್ಲುವ ಪಕ್ಷ ಎಂದು ಬೊಬ್ಬಿರಿಯುವ ಕಾಂಗ್ರೆಸ್, ಈ ಅಮಾನವೀಯ ಕೃತ್ಯವನ್ನು ಹೇಗೆ ಸಮರ್ಥಿಸಿಕೊಳ್ಳುತ್ತದೆ? ಅಲ್ಪಸಂಖ್ಯಾತರು ಮತ್ತು ಬಡವರ ರಕ್ಷಣೆ ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದವರು, ಇಂದು ಅದೇ ಜನರ ಸೂರು ಕಸಿದುಕೊಳ್ಳುವ ಮೂಲಕ ಯಾವ ಸಂದೇಶ ನೀಡಲು ಹೊರಟಿದ್ದಾರೆ ಎಂದು ಕೇರಳ ಸಿಎಂ ಕರ್ನಾಟಕ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.
ಘಟನೆಯ ಹಿನ್ನೆಲೆ ಏನು?
ಕಳೆದ ವಾರ ಕರ್ನಾಟಕ ಸರ್ಕಾರವು ಯಲಹಂಕದ ಕೋಗಿಲು ಲೇಔಟ್ ಬಳಿಯ ಫಕೀರ್ ಕಾಲೋನಿ ಮತ್ತು ವಸೀಮ್ ಬಡಾವಣೆಯಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿದೆ ಎನ್ನಲಾದ 200ಕ್ಕೂ ಹೆಚ್ಚು ಮನೆಗಳನ್ನು ಜೆಸಿಬಿ ಮತ್ತು ಬುಲ್ಡೋಜರ್ ಬಳಸಿ ಕೆಡವಿತ್ತು. ತ್ಯಾಜ್ಯ ಸಂಸ್ಕರಣಾ ಘಟಕಕ್ಕೆಂದು ಗುರುತಿಸಲಾಗಿದ್ದ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಈ ಬಡಾವಣೆಗಳನ್ನು ನಿರ್ಮಿಸಲಾಗಿತ್ತು ಎಂಬ ಆರೋಪದಡಿ ಸರ್ಕಾರ ಈ ಕ್ರಮ ಕೈಗೊಂಡಿತ್ತು. ಆದರೆ ಏಕಾಏಕಿ ನೂರಾರು ಕುಟುಂಬಗಳನ್ನು ಬೀದಿಗೆ ತಳ್ಳಿದ ಸರ್ಕಾರದ ಕ್ರಮ ಇದೀಗ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ.








