ಕೇರಳದಲ್ಲಿ ರಾಜಕೀಯ ಹತ್ಯೆ – ಆರೋಪಿಗಳ ಪತ್ತೆಗೆ ಬಲೆ ಬೀಸಿದ ಪೊಲೀಸ್
ಕೇರಳದಲ್ಲಿ ಇತ್ತೀಚೆಗೆ ನಡೆದ ಎರಡು ರಾಜಕೀಯ ಕೊಲೆಗಳು ದೇಶಾದ್ಯಂತ ಸುದ್ದಿಯಾಗಿತ್ತು. ಬಿಜೆಪಿ ಕಾರ್ಯಕರ್ತ ರಂಜಿತ್ ಶ್ರೀನಿವಾಸ್ ಹತ್ಯೆಯಲ್ಲಿ ನೇರವಾಗಿ ಭಾಗಿಯಾಗಿರುವ ಶಂಕಿತ ಎಲ್ಲ 12 ಆರೋಪಿಗಳನ್ನು ಕೇರಳ ಪೊಲೀಸರು ಗುರುತಿಸಿದ್ದಾರೆ. ಆದರೆ ಅವರು ಕೇರಳದಿಂದ ಪರಾರಿಯಾಗಿದ್ದು ಅವರಿಗಾಗಿ ಬಲೆ ಬೀಸಲಾಗಿದೆ.
ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ವಿಶೇಷ ಪೊಲೀಸ್ ತಂಡಗಳನ್ನು ನಿಯೋಜಿಸಲಾಗಿದ್ದು, ರಾಜ್ಯದ ಹೊರಗೆ ತನಿಖೆಯನ್ನು ವಿಸ್ತರಿಸಲಾಗಿದೆ ಎಂದು ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ವಿಜಯ್ ಸಾಖರೆ ಸುದ್ದಿಗಾರರಿಗೆ ತಿಳಿಸಿದರು.
ಶನಿವಾರ ರಾತ್ರಿ ಮನೆಗೆ ತೆರಳುತ್ತಿದ್ದ ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಶಾನ್ ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದರೆ, ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಶ್ರೀನಿವಾಸ್ ಅವರನ್ನು ಭಾನುವಾರ ಬೆಳಗ್ಗೆ ಅವರ ಮನೆಯಲ್ಲೇ ಕೆಲ ದುಷ್ಕರ್ಮಿಗಳು ಮನೆಯವರ ಎದುರೇ ಮಾರಕಾಸ್ತ್ರಗಳಿಂದ ಹತ್ಯೆಗೈದಿದ್ದಾರೆ.
ಶ್ರೀನಿವಾಸ್ ಹತ್ಯೆಗೆ ಸಂಬಂಧಿಸಿದಂತೆ ಐವರು ಎಸ್‌ಡಿಪಿಐ ಸಹಾನುಭೂತಿ ಹೊಂದಿರುವವರನ್ನು ಇದುವರೆಗೆ ಬಂಧಿಸಲಾಗಿದ್ದು, ಶಾನ್ ಹತ್ಯೆಯಲ್ಲಿ ಮೂವರ ಬಂಧನವನ್ನು ಪೊಲೀಸರು ದಾಖಲಿಸಿದ್ದಾರೆ.
ಕೊನೆಗೂ ಅಂಗೀಕಾರಗೊಂಡ ಮತಾಂತರ ನಿಷೇಧ ಕಾಯ್ದೆ…








