KH Muniappa-
ರಾಜ್ಯ ರಾಜಕಾರಣದತ್ತ ಮುಖ ಮಾಡ್ತಾರಾ ಕೆ.ಹೆಚ್ ಮುನಿಯಪ್ಪ ? ಲೋಕ ಕದನದಲ್ಲಿ ಸೋಲುಂಡ ಕೈ ನಾಯಕನ ಮುಂದಿನ ನಡೆ ಏನು ? ದೇವನಹಳ್ಳಿ ಕ್ಷೇತ್ರದಿಂದ ಅಖಾಡಕ್ಕೀಳಿತಾರಾ ಮಾಜಿ ಸಂಸದ ?
ಎಸ್..! ಸದ್ಯ ಕೋಲಾರ ಜಿಲ್ಲೆಯಲ್ಲಿ ನಡೆಯುತ್ತಿರುವ ಬಿಸಿ ಬಿಸಿ ಚರ್ಚೆ ಇದು.
ಕಳೆದ 2019 ರ ಲೋಕಸಭಾ ಚುನಾವಣೆಯಲ್ಲಿ ಸೋಲುಂಡ ಬಳಿಕ ಸ್ವಂತ ಪಕ್ಷದವರ ವಿರುದ್ಧವೇ ಮುನಿಯಪ್ಪ ಮುನಿಸಿಕೊಂಡಿದ್ದಾರೆ. ಅದರಲ್ಲೂ ವಿಧಾನಸಭಾದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಬಹಿರಂಗವಾಗಿಯೇ ಬೆಂಕಿ ಉಗುಳುತ್ತಿದ್ದಾರೆ. ಜೊತೆಗೆ ಜಿಲ್ಲಾ ಕಾಂಗ್ರೆಸ್ ನಲ್ಲಿ ನಡೆದ ಕೆಲವು ಬದಲಾವಣೆಗಳಿಂದ ಬೇಸತ್ತ ಮುನಿಯಪ್ಪ ಪಕ್ಷ ಬದಲಿಸುತ್ತಾರೆ ಎನ್ನುವ ಮಾತುಗಳು ಕೂಡ ಕೇಳಿಬಂದಿದ್ದವು.
ಆದ್ರೆ ಈ ಗಾಳಿ ಮಾತುಗಳಿಗೆ ಖಡಕ್ ಆಗಿಯೇ ಫುಲ್ ಸ್ಟಾಪ್ ಇಟ್ಟ ಮುನಿಯಪ್ಪ ಪಕ್ಷ ಬಿಡುವ ಮಾತೇ ಇಲ್ಲ ಎಂದು ಸ್ಪಷ್ಟಪಡಿಸಿದ್ದರು.
ಏತನ್ಮಧ್ಯೆ ಕೆ.ಹೆಚ್ ಮುನಿಯಪ್ಪ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅದೃಷ್ಠ ಪರೀಕ್ಷೆಗೆ ಇಳಿಯಲಿದ್ದಾರೆ ಅನ್ನುವ ಮಾತುಗಳು ಕೇಳಿಬಂದಿದ್ದು, ಅವರ ಆಪ್ತವಲಯ ಈ ಸುದ್ದಿಯನ್ನು ಅಧಿಕೃತಗೊಳಿಸಿತ್ತು. ಆದ್ರೆ ಈ ಬಗ್ಗೆ ಕೆ.ಹೆಚ್. ಮುನಿಯಪ್ಪ ಎಲ್ಲೂ ಮಾತನಾಡಿರಲಿಲ್ಲ.
ಇತ್ತೀಚೆಗೆ ಈ ವಿಚಾರವಾಗಿ ಬೆಂಗಳೂರಿನಲ್ಲಿ ಕೆ.ಹೆಚ್. ಮುನಿಯಪ್ಪ ಪ್ರತಿಕ್ರಿಯೆ ನೀಡಿದ್ದು, ಸುಮಾರು ಒಂದು ವರ್ಷದಿಂದ ರಾಜ್ಯ ರಾಜಕಾರಣಕ್ಕೆ ಬರಬೇಕು ಅಂತಾ ಒತ್ತಾಯವಿದೆ. ಈ ಬಗ್ಗೆ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡಬೇಕಾಗಿದ್ದು, ಅವರ ತೀರ್ಮಾನಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ ದೇವನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಮಾತನಾಡಿ, ಕ್ಷೇತ್ರದ ವಿಚಾರದಲ್ಲೂ ಹೈಕಮಾಂಡ್ ತೀರ್ಮಾನವೇ ಅಂತಿಮ.
ರಾಜ್ಯದಲ್ಲಿ ಸಿಎಲ್ ಪಿ ನಾಯಕರಾದ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಇದ್ದು, ಇವರೆಲ್ಲಾ ಸೇರಿ ತೀರ್ಮಾನ ಮಾಡಬೇಕಾಗುತ್ತದೆ. ಒಂದು ವೇಳೆ ಹೈಕಮಾಂಡ್ ಮತ್ತು ರಾಜ್ಯದ ನಾಯಕರು ಸೇರಿ ಚುನಾವಣೆಯಲ್ಲಿ ಸ್ಪರ್ಧಿಸಿ ಅಂತ ಹೇಳಿದ್ರೆ ನಾನು ಸಿದ್ಧ ಎಂದು ಹೆಚ್.ಕೆ.ಮುನಿಯಪ್ಪ ತಿಳಿಸಿದ್ದಾರೆ.
ಒಟ್ಟಾರೆ ಬರೋಬ್ಬರಿ 30 ವರ್ಷಕ್ಕೂ ಅಧಿಕ ವರ್ಷಗಳ ಕಾಲ ಕೋಲಾರ ಸಂಸದರಾಗಿ ಅಧಿಕಾರ ಚಲಾಯಿಸಿದ ಕೆ.ಹೆಚ್.ಮುನಿಯಪ್ಪ, ಇದೀಗ ರಾಜ್ಯ ರಾಜಕಾರಣಕ್ಕೆ ಧುಮುಕುತ್ತಾರಾ ಎನ್ನುವುದನ್ನ ಕಾದು ನೋಡಬೇಕಾಗಿದೆ.








