ಹಾಸನ: ಚಿನ್ನಾಭರಣ ದೋಚುತ್ತಿದ್ದ ಖತರ್ನಾಕ್ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹತ್ತು ಕಡೆಗಳಲ್ಲಿ ಮನೆ ಕಳ್ಳತನ ಮಾಡಿದ್ದ ಖತರ್ನಾಕ್ ಕಳ್ಳನನ್ನು ಹಾಸನ (Hassan) ಪೊಲೀಸರು ಅರೆಸ್ಟ್ ಮಾಡಿದ್ದು, ಬಂಧಿತನಿಂದ ಸುಮಾರು 31 ಲಕ್ಷ ರೂ.ಗೂ ಅಧಿಕ ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಪೊಲೀಸರು (Police) ವಶಕ್ಕೆ ಪಡೆದಿದ್ದಾರೆ.
ಆಲೂರಿನ ಮುದಿಗೆರೆ ಗ್ರಾಮದ ಸಂತೋಷ್ ಬಂಧಿತ ಆರೋಪಿ. ಆರೋಪಿಯಿಂದ 30,61,812 ರೂ. ಮೌಲ್ಯದ 521 ಗ್ರಾಂ ಚಿನ್ನಾಭರಣ, 36,112 ರೂ. ಮೌಲ್ಯದ 488 ಗ್ರಾಂ ಬೆಳ್ಳಿ ಆಭರಣ, 1 ಬೈಕ್ ಹಾಗೂ 16 ಸಾವಿರ ರೂ. ನಗದು ವಶಕ್ಕೆ ಪಡೆಯಲಾಗಿದೆ.
ಆರೋಪಿಯು ಹನಿಕೆ ಗ್ರಾಮದ ಅಶ್ವಥ್ ಎಂಬವರ ಮನೆಯಲ್ಲಿ ಕಳ್ಳತನ ಮಾಡಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಕೋಗಿಲಮನೆ ಹತ್ತಿರ ಬಂಧಿಸಿದ್ದರು. ವಿಚಾರಣೆ ಸಂದರ್ಭದಲ್ಲಿ ಹಲವಾರು ಮನೆಗಳಲ್ಲಿ ಕಳ್ಳತನ ಮಾಡಿರುವ ಕುರಿತು ಆತ ಒಪ್ಪಿಕೊಂಡಿದ್ದಾನೆ. ಕದ್ದು ವಸ್ತುಗಳನ್ನು ಬೇರೆಯವರ ಸಹಾಯದಿಂದ ಜ್ಯುವೇಲರಿಗೆ ಮಾರಾಟ ಮಾಡಿದ್ದ ಎನ್ನಲಾಗಿದೆ. ಈತ 2013 ರಿಂದ 58 ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮದ್ ಸುಜೀತಾ ತಿಳಿಸಿದ್ದಾರೆ.








