ಬೆಂಗಳೂರು: 9, 10ನೇ ತರಗತಿ, ಪ್ರಥಮ, ದ್ವಿತೀಯ ಪಿಯುಸಿವರೆಗಿನ ವಿದ್ಯಾರ್ಥಿಗಳು ಅನುಮಾನ ಬಗೆಹರಿಸಿಕೊಳ್ಳಲು ಶಾಲಾ-ಕಾಲೇಜಿಗೆ ಹೋಗಿ ಬರಬರಲು ನೀಡಿದ್ದ ವಿನಾಯಿತಿಯನ್ನು ಮತ್ತೆ ರದ್ದು ಮಾಡಲಾಗಿದೆ.
ಅಕ್ಟೋಬರ್ 15ರವರೆಗೆ ಯಾವ ಮಕ್ಕಳೂ ಶಾಲಾ-ಕಾಲೇಜಿಗೆ ಹೋಗದಂತೆ ನಿರ್ಬಂಧ ವಿಧಿಸಿ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಮತ್ತೆ ಆದೇಶ ಹೊರಡಿಸಿದ್ದಾರೆ.
ರಾಜ್ಯದಲ್ಲಿ ಮತ್ತೆ ಭಾರಿ ಪ್ರಮಾಣದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದು, ಸಾವಿನ ಸಂಖ್ಯೆಯಲ್ಲೂ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ತನ್ನ ನಿರ್ಧಾರವನ್ನು ಬದಲಿಸಿದೆ.
ಸೆಪ್ಟೆಂಬರ್ 21ರಿಂದ ಕಂಟೈನ್‍ಮೆಂಟ್ ಝೋನ್ ಹೊರತುಪಡಿಸಿ ಉಳಿದ ಪ್ರದೇಶಗಳಲ್ಲಿ ವಿದ್ಯಾರ್ಥಿಗಳು ತಮ್ಮ ಪಠ್ಯಗಳ ಬಗ್ಗೆ ಶಿಕ್ಷಕರಿಂದ ಅನುಮಾನ ಬಗೆಹರಿಸಿಕೊಳ್ಳಲು ಶಾಲಾ-ಕಾಲೇಜಿಗೆ ಹೋಗಿ ಬರಬಹುದು. ಆದರೆ ತರಗತಿ ನಡೆಸುವಂತಿಲ್ಲ ಎಂದು ಕೇಂದ್ರ ಸರ್ಕಾರ ಅನ್‍ಲಾಕ್ 4.0 ಗೈಡ್‍ಲೈನ್ಸ್‍ನಲ್ಲಿ ಅನುಮತಿ ನೀಡಿತ್ತು.
ಆದರೆ, ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಅನುಮತಿಯನ್ನು ರದ್ದು ಮಾಡಿ ಸೆ.30ರವರೆಗೆ ವಿಸ್ತರಣೆ ಮಾಡಲಾಗಿತ್ತು.
ನಿನ್ನೆ ಕೇಂದ್ರ ಸರ್ಕಾರ ಅನ್‍ಲಾಕ್ 5.0 ಗೈಡ್‍ಲೈನ್ಸ್ ಪ್ರಕಟಿಸಿದೆ. ಈ ಗೈಡ್‍ಲೈನ್ಸ್‍ನಲ್ಲಿ ಅಕ್ಟೋಬರ್ 15ರಿಂದ ಶಾಲಾ-ಕಾಲೇಜು ಆರಂಭಿಸಲು ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಅನುಮಾನ ಬಗೆಹರಿಸಿಕೊಳ್ಳಲು ಶಾಲೆ-ಕಾಲೇಜಿಗೆ ಹೋಗಲು ಅಕ್ಟೋಬರ್ 15ರವರೆಗೂ ಕಾಯಲೇಬೇಕಿದೆ. ಈ ಸಂಬಂಧ ನಿನ್ನೆ(ಬುಧವಾರ) ಮತ್ತೊಂದು ಆದೇಶ ಹೊರಡಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆ, ಅ.15ರವರೆಗೆ ಶಾಲಾ-ಕಾಲೇಜುಗಳಿಗೆ ಮಕ್ಕಳು ಹೋಗಿ ಬರುವುದನ್ನು ನಿರ್ಬಂಧಿಸಿದೆ.
ಪರಿಸ್ಥಿತಿಯನ್ನು ಅವಲೋಕಿಸಿ ನಂತರ ಮುಂದಿನ ತೀರ್ಮಾನನ್ನು ತಿಳಿಸಲಾಗುವುದು. ಅಲ್ಲಿಯವರೆಗೆ ಶಾಲೆ-ಪದವಿಪೂರ್ವ ಕಾಲೇಜುಗಳಿಗೆ ವಿದ್ಯಾರ್ಥಿಗಳು ಭೇಟಿ ನೀಡುವಂತಿಲ್ಲ ಎಂದು ಆದೇಶದಲ್ಲಿ ಸೂಚಿಸಲಾಗಿದೆ.