ಬೆಂಗಳೂರು: ತುಂಡುಗೆ ತೊಟ್ಟು ಪಾರ್ಕಿನಲ್ಲಿ ರಿಂಗ್ ಅಭ್ಯಾಸ ಮಾಡಲು ಬಂದಿದ್ದ ನಟಿ ಸಂಯುಕ್ತ ಹೆಗಡೆ ಜತೆ ಗಲಾಟೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಬಂಧನಕ್ಕೊಳಗಾಗಿದ್ದ ಕಾಂಗ್ರೆಸ್ ನಾಯಕಿ ಕವಿತಾ ರೆಡ್ಡಿ ಅವರನ್ನು ಬಿಡುಗಡೆ ಮಾಡಲಾಗಿದೆ.
ಬೆಂಗಳೂರಿನ ಹೆಚ್‍ಎಸ್‍ಆರ್ ಲೇಔಟ್‍ನ ಪಾರ್ಕ್‍ನಲ್ಲಿ ಶುಕ್ರವಾರ ಸಂಜೆ ರಿಂಗ್ ಅಭ್ಯಾಸ ಮಾಡಲು ಸಂಯುಕ್ತಾ ಸ್ನೇಹಿತರೊಂದಿಗೆ ತೆರಳಿದ್ದರು. ಈ ವೇಳೆ ತುಂಡುಬಟ್ಟೆ ತೊಟ್ಟು ಅಸಭ್ಯವಾಗಿ ವರ್ತಿಸುತ್ತಿದ್ದೀರಿ ಎಂದು ಕವಿತಾ ರೆಡ್ಡಿ ನಿಂದಿಸಿ ವಿಡಿಯೋ ಮಾಡಿದ್ದಲ್ಲದೆ ಹಲ್ಲೆಗೆ ಮುಂದಾಗಿದ್ದರಂತೆ. ಈ ಸಂಬಂಧ ಸಂಯುಕ್ತಾ ಹೆಗಡೆ ಹೆಚ್‍ಎಸ್‍ಆರ್ ಲೇಔಟ್ ಠಾಣೆಗೆ ದೂರು ನೀಡಿದ್ದರು.
ದೂರಿನ ಸಂಬಂಧ ಪೊಲೀಸರು ಎಫ್‍ಐಆರ್ ದಾಖಲಿಸಿ ಕವಿತಾ ರೆಡ್ಡಿ ಅವರನ್ನು ಬಂಧಿಸಿದ್ದರು. ಇಂದು ಕವಿತಾ ರೆಡ್ಡಿ ಅವರನ್ನು ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಪ್ರಕರಣದ ಮತ್ತೊಬ್ಬ ಆರೋಪಿ ಅನಿಲ್ ರೆಡ್ಡಿ ಮತ್ತು ಇತರರಿಗಾಗಿ ಹುಟುಕಾಟ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಯುಕ್ತಾ ಹೆಗಡೆ ಮೇಲೆ ನಡೆದ ಹಲ್ಲೆ ಯತ್ನದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕವಿತಾ ರೆಡ್ಡಿ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿತ್ತು. ಸ್ಯಾಂಡಲ್‍ವುಡ್‍ನ ಕೆಲ ನಟಿಯರು ಸಂಯುಕ್ತಾ ಹೆಗಡೆಗೆ ಬೆಂಬಲ ಸೂಚಿಸಿದ್ದರು.
ಜಾಮೀನಿನ ಮೇಲೆ ಬಿಡುಗಡೆ ನಂತರ ತಾವು ಮಾಡಿದ್ದು ಸರಿಯಲ್ಲ ಎಂಬುದು ನನಗೆ ಅರಿವಾಗಿದೆ. ನೈತಿಕ ಪೊಲೀಸ್ ಗಿರಿ ಮಾಡುವ ಉದ್ದೇಶ ನನ್ನದಾಗಿರಲಿಲ್ಲ. ನನ್ನ ತಪ್ಪಿಗೆ ಕ್ಷಮೆಯಾಚಿಸುತ್ತೇನೆ ಎಂದು ಕವಿತಾ ರೆಡ್ಡಿ ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ.