ಕೆಕೆಆರ್ ಕಥೆ ಗೋವಿಂದಾ… ಡೆಲ್ಲಿ ಆಸೆ ಜೀವಂತ
ಮುಂಬೈನ ವಾಂಖೆಡೆ ಅಂಗಳದಲ್ಲಿ ನಡೆದ ಜಿದ್ದಾಜಿದ್ದನ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಾಲ್ಕು ವಿಕೆಟ್ ಗಳಿಂದ ಗೆಲುವು ಸಾಧಿಸಿದೆ.
ಇದರೊಂದಿಗೆ ಟೂರ್ನಿಯಲ್ಲಿ 8 ಪಂದ್ಯಗಳನ್ನಾಡಿ ನಾಲ್ಕು ಗೆಲುವುಗಳೊಂದಿಗೆ 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಆರನೇ ಸ್ಥಾನಕ್ಕೇರಿದೆ.
ಇತ್ತ ಐದನೇ ಸೋಲು ಅನುಭವಿಸಿದ ಶ್ರೇಯಸ್ ಅಯ್ಯರ್ ಪಡೆ 9 ಪಂದ್ಯಗಳನ್ನಾಡಿ ಮೂರು ಪಂದ್ಯಗಳಲ್ಲಿ ಗೆದ್ದು ಎಂಟನೇ ಸ್ಥಾನಕ್ಕೆ ಕುಸಿದಿದೆ.
ಈ ಸೋಲಿನೊಂದಿಗೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಪ್ಲೇ ಆಫ್ಸ್ ನಿಂದ ತುಂಬಾ ದೂರ ಹೋಗಿದೆ.
ಕೆಕೆಆರ್ ಗೆ ಇನ್ನುಳಿದ ಪಂದ್ಯಗಳು ಆಟಕ್ಕುಂಟು ಲೆಕ್ಕಕ್ಕೆ ಇಲ್ಲ ಎಂಬಂತಾಗಿದೆ.
ಇನ್ನು ಪಂದ್ಯದ ವಿಚಾರಕ್ಕೆ ಬಂದರೇ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
ಪರಿಣಾಮ ಮೊದಲು ಬ್ಯಾಟಿಂಗ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 146 ಕಲೆ ಹಾಕಿತು. ಈ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 19 ಓವರ್ ಗಳಲ್ಲಿ ಆರು ವಿಕೆಟ್ ಕಳೆದುಕೊಂಡು 150 ರನ್ ಗಳಿಸಿತು.
ಕೆಕೆಆರ್ ನೀಡಿದ ಟಾರ್ಗೆಟ್ ಬೆನ್ನಟ್ಟಿದ ಡೆಲ್ಲಿಗೆ ಉತ್ತಮ ಆರಂಭ ಸಿಗಲಿಲ್ಲ. ಮೊದಲ ಓವರ್ ನಲ್ಲಿಯೇ ಪೃಥ್ವಿ ಶಾ ಗೋಲ್ಡನ್ ಡಕ್ ಆದರು.
ನಂತರ ಕ್ರೀಸ್ ಗೆ ಬಂದ ಮಿಚೆಲ್ ಮಾರ್ಷ್ 13 ರನ್ ಸಿಡಿಸಿ ಬಂದ ಹಾಡಿಯಲ್ಲೇ ವಾಪಸ್ ನಡೆದರು.
ಈ ಹಂತದಲ್ಲಿ ತಂಡಕ್ಕೆ ಚೇತರಿಕೆ ನೀಡಿದ ಡೇವಿಡ್ ವಾರ್ನರ್ ಬಿರುಸಿನ 42 ರನ್ ಗಳಿಸಿ ಔಟ್ ಆದರು.
ಇದರ ಬೆನ್ನಲ್ಲೆ22 ರನ್ ಸಿಡಿಸಿ ವಾರ್ನರ್ ಗೆ ಸಾಥ್ ನೀಡಿದ್ದ ಲಲಿತ್ ಯಾದವ್ ಕೂಡ ಔಟ್ ಆದರು.
ಕೊನೆಯಲ್ಲಿ ರೋವ್ ಮನ್ ಪೊವೆಲ್ 33 ರನ್, ಅಕ್ಷರ್ ಪಟೇಲ್ 24 ರನ್ ಸಿಡಿಸಿ ತಂಡದ ಗೆಲುವು ಪಕ್ಕಾ ಮಾಡಿದರು.
16 ಎಸೆತಗಳಲ್ಲಿ 33 ರನ್ ಚಚ್ಚಿದ ಪೊವೆಲ್ ಗೆಲುವಿನ ಹೀರೋ ಆದರು.
ಕೆಕೆಆರ್ ಎಂಟು ಮಂದಿ ಬೌಲಿಂಗ್ ಮಾಡಿದ್ರೂ ಯಾವುದೇ ಉಪಯೋಗವಾಗಲಿಲ್ಲ. ಉಮೇಶ್ ಯಾದವ್ 3 ವಿಕೆಟ್ ಪಡೆದರು.
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಕೊಲ್ಲತ್ತಾ ನೈಟ್ ರೈಡರ್ಸ್ ಗೆ ಮತ್ತೆ ಆರಂಭಿಕರು ಕೈ ಕೊಟ್ಟರು.
ಪಿಂಚ್ ಮೂರು, ವೆಂಕಟೇಶ್ ಅಯ್ಯರ್ 6 ರನ್ ಗಳಿಸಿದರು. ನಂತರ ಇಂದ್ರಜಿತ್, ನರೈನ್ ಕೂಡ ಕ್ರೀಸ್ ನಲ್ಲಿ ನಿಲ್ಲಲಿಲ್ಲ.
ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ನಾಯಕ ಶ್ರೇಯಸ್ ಅಯ್ಯರ್, ನಿತೀಶ್ ರಾಣಾ ಆಸರೆಯಾದರು. 37 ಎಸೆತಗಳಲ್ಲಿ ಅಯ್ಯರ್ 42 ರನ್ ಗಳಿಸಿದರು.
ರಾಣಾ 34 ಎಸೆತಗಳಲ್ಲಿ 57 ರನ್ ಗಳಿಸಿದರು. ಕೊನೆಯಲ್ಲಿ ರಿಂಕು ಸಿಂಗ್ 16 ಎಸೆತಗಳಲ್ಲಿ 23 ರನ್ ಸಿಡಿಸಿ ತಂಡದ ಮೊತ್ತವನ್ನು 140ರ ಗಡಿ ದಾಟಿಸಿದರು.
ಡೆಲ್ಲಿ ಪರ ಕುಲ್ ದೀಪ್ ಯಾದವ್ ನಾಲ್ಕು ವಿಕೆಟ್ ಪಡೆದರು.
kkr-vs-dc-match-Delhi defeat Kolkata by 4 wickets