K L Rahul | ಲಕ್ನೋ ಸೋಲಿಗೆ ಕಾರಣ ಬಿಚ್ಚಿಟ್ಟ ರಾಹುಲ್
ಎಂಟ್ರಿ ಕೊಟ್ಟ ಮೊದಲ ಸೀಸನ್ ನಲ್ಲಿಯೇ ಪ್ಲೇ ಆಫ್ಸ್ ಪ್ರವೇಶಿಸಿದ ಲಕ್ನೋ ಸೂಪರ್ ಜೈಂಟ್ಸ್ ತಂಡ ನಿರ್ಣಾಯಕ ಪಂದ್ಯದಲ್ಲಿ ಸೋಲುಂಡಿದೆ.
ಲೀಗ್ ಹಂತದಲ್ಲಿ ಅದ್ಭುತ ಪ್ರದರ್ಶನ ನೀಡಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ನಿಂತ ಕೆ.ಎಲ್.ರಾಹುಲ್ ಸೇನೆ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೆಣಸಿತ್ತು.
ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಂಘಟಿತ ಪ್ರದರ್ಶನ ನೀಡಿ ಲಕ್ನೋ ವಿರುದ್ಧ ಗೆಲುವು ಕಂಡಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್ ಸಿಬಿ ತಂಡ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 206 ರನ್ ಗಳಿಸಿತು.
ಈ ಟಾರ್ಗೆಟ್ ಬೆನ್ನತ್ತಿದ ಲಕ್ನೋ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 193 ರನ್ಗಳಿಸಿತು. ಆ ಮೂಲಕ 14 ರನ್ಗಳ ಜಯಭೇರಿ ಬಾರಿಸಿರುವ ಆರ್ಸಿಬಿ, ಇದೀಗ ಎರಡನೇ ಎಲಿಮಿನೇಟರ್ ಪಂದ್ಯಕ್ಕೆ ಲಗ್ಗೆಯಿಟ್ಟಿದೆ. ಇತ್ತ ಪಂದ್ಯ ಸೋತ ಲಕ್ನೋ ಸೂಪರ್ ಜೈಂಟ್ಸ್ ತಂಡ ಟೂರ್ನಿಯಿಂದ ಹೊರನಡೆದಿದೆ.
ಪಂದ್ಯ ಸೋಲಿನ ಬಳಿಕ ಮಾತನಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆ.ಎಲ್.ರಾಹುಲ್, ತಮ್ಮ ತಂಡದ ಫೀಲ್ಡಿಂಗ್ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದರು. ಆದ್ರೆ ಹೊಸ ತಂಡವಾಗಿದ್ದರೂ ಚೊಚ್ಚಲ ಪ್ರಯತ್ನದಲ್ಲಿಯೇ ಪ್ಲೇ ಆಫ್ ಪ್ರವೇಶಿಸಿದ್ದು, ಖುಷಿ ತಂದಿದೆ ಎಂದಿದ್ದಾರೆ.
ಮೈದಾನದಲ್ಲಿ ನಾವು ಮಾಡಿದ ತಪ್ಪುಗಳಿಂದಲೇ ನಾವು ಸೋಲು ಕಂಡಿದ್ದೇವೆ. ಸುಲಭವಾದ ಕ್ಯಾಚ್ ಗಳನ್ನ ಬಿಟ್ಟು ಪಂದ್ಯ ಗೆಲ್ಲಬೇಕು ಅಂದರೇ ಆಗುವುದಿಲ್ಲ. ಪಟಿದಾರ್ ಅದ್ಭುತವಾಗಿ ಆಡಿದರು.

ಟಾಪ್ ಆರ್ಡರ್ ನಲ್ಲಿ ಒಂದನೇ ಕ್ರಮಾಂಕದಲ್ಲಿ ಆಗಮಿಸಿ ಶತಕ ಬಾರಿಸಿದ್ರೆ ಆ ತಂಡಕ್ಕೆ ಗೆಲ್ಲುವ ಅವಕಾಶಗಳು ಹೆಚ್ಚಾಗಿರುತ್ತವೆ. ಇಂದಿನ ಪಂದ್ಯದಲ್ಲಿ ಅದೇ ನಡೆಯಿತು.
ಆರ್ ಸಿಬಿ ತಂಡದ ಆಟಗಾರರು ಅದ್ಭುತವಾಗಿ ಫೀಲ್ಡಿಂಗ್ ಮಾಡಿದರು. ನಮ್ಮ ಫೀಲ್ಡಿಂಗ್ ಕೆಟ್ಟದಾಗಿ ಇತ್ತು ಎಂದು ರಾಹುಲ್ ಹೇಳಿದ್ದಾರೆ.
ಇನ್ನು ತಮ್ಮ ತಂಡದ ಬಗ್ಗೆ ಮಾತನಾಡುತ್ತಾ, ನಮ್ಮದು ಹೊಸ ಫ್ರಾಂಚೈಸಿ, ಇದರಲ್ಲಿ ಸಾಕಷ್ಟು ಮಂದಿ ಯುವಕರೇ ಇದ್ದಾರೆ. ನಾವು ಸಾಕಷ್ಟು ತಪ್ಪುಗಳನ್ನ ಮಾಡಿದ್ದೇವೆ.
ಅವುಗಳಿಂದ ನಾವು ಪಾಠಗಳನ್ನು ಕಲಿತು, ಮುಂದಿನ ಸೀಸನ್ ನಲ್ಲಿ ಸ್ಟ್ರಾಂಗ್ ಕಂ ಬ್ಯಾಕ್ ಮಾಡುತ್ತೇವೆ. ಮೊಹ್ಸಿನ್ ಖಾನ್ ಪ್ರತಿಭಾವಂತ ಬೌಲರ್ ಆಗಿದ್ದಾರೆ. ಮುಂದಿನ ಸೀಸನ್ ನಲ್ಲಿ ಆತ ಮತ್ತಷ್ಟು ಅದ್ಭುತವಾಗಿ ಆಡುವ ಅವಕಾಶಗಳಿವೆ ಎಂದು ರಾಹುಲ್ ತಿಳಿಸಿದರು.
ಅಂದಹಾಗೆ ಇದೇ ಮೊದಲ ಬಾರಿಗೆ ಐಪಿಎಲ್ ನಲ್ಲಿ ಕಾಣಿಸಿಕೊಂಡ ಲಕ್ನೋ ಸೂಪರ್ ಜೈಂಟ್ಸ್ ತಂಡ, ಲೀಗ್ ಹಂತದಲ್ಲಿ ಅದ್ಭುತ ಪ್ರದರ್ಶನ ನೀಡಿದೆ. 14 ಪಂದ್ಯಗಳಲ್ಲಿ ಒಂಭತ್ತು ಪಂದ್ಯಗಳಲ್ಲಿ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ದಕ್ಕಿಸಿಕೊಂಡು ಎಲಿಮಿನೇಟರ್ ಪಂದ್ಯದಲ್ಲಿ ಸೋತಿದೆ.
ಲಕ್ನೋ ತಂಡದ ಪರ ಬ್ಯಾಟಿಂಗ್ ನಲ್ಲಿ ನಾಯಕ ಕೆ.ಎಲ್ ರಾಹುಲ್, ಕ್ವಿಂಟನ್ ಡಿ ಕಾಕ್ ಐನೂರಕ್ಕೂ ಹೆಚ್ಚು ರನ್ ಬಾರಿಸಿದ್ದಾರೆ. ಮತ್ತೊಬ್ಬ ಬ್ಯಾಟರ್ ದೀಪಕ್ ಹೂಡಾ ನಾನೂರಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.








