ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಚರ್ಚೆ ತಣ್ಣಗಾಗುವ ಬದಲು ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದೆ. ಸಿಎಂ ಕುರ್ಚಿ ವಿಚಾರವಾಗಿ ನಡೆಯುತ್ತಿರುವ ಶೀತಲ ಸಮರಕ್ಕೆ ಇದೀಗ ಸಹಕಾರಿ ಸಚಿವ ಕೆಎನ್ ರಾಜಣ್ಣ ಅವರು ಮತ್ತಷ್ಟು ತುಪ್ಪ ಸುರಿದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಸಿಎಂ ಆಗಿ ಮುಂದುವರಿಯಲಿದ್ದಾರೆ ಎಂದು ಪ್ರತಿಪಾದಿಸಿರುವ ರಾಜಣ್ಣ, ಒಂದು ವೇಳೆ ನಾಯಕತ್ವ ಬದಲಾವಣೆ ಅನಿವಾರ್ಯವಾದರೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಾತ್ರ ಏಕೈಕ ಸ್ಪರ್ಧಿಯಲ್ಲ ಎಂದು ನೇರವಾಗಿಯೇ ಬಾಂಬ್ ಸಿಡಿಸಿದ್ದಾರೆ.
ಐದು ವರ್ಷ ಸಿದ್ದರಾಮಯ್ಯ ಅವರೇ ಫಿಕ್ಸ್
ಮುಖ್ಯಮಂತ್ರಿ ಸ್ಥಾನದ ಕುರಿತು ನಡೆಯುತ್ತಿರುವ ಊಹಾಪೋಹಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ ರಾಜಣ್ಣ, ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆಯಲ್ಲಿ ಮತದಾನದ ಮೂಲಕ ಐದು ವರ್ಷಗಳ ಪೂರ್ಣಾವಧಿಗೆ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಅವರು ಕೇವಲ ಎರಡೂವರೆ ವರ್ಷಕ್ಕೆ ಸೀಮಿತವಾಗಿಲ್ಲ. ಬದಲಾಗಿ ಪೂರ್ಣ ಐದು ವರ್ಷಗಳ ಕಾಲ ಅವರೇ ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಅದು ಅವರ ವೈಯಕ್ತಿಕ ಅಭಿಪ್ರಾಯವಿರಬಹುದು, ಆದರೆ ಸಾಂವಿಧಾನಿಕವಾಗಿ ಮತ್ತು ಪಕ್ಷದ ವೇದಿಕೆಯಲ್ಲಿ ಸಿದ್ದರಾಮಯ್ಯನವರೇ ಸುಪ್ರೀಂ ಎಂದು ಸ್ಪಷ್ಟಪಡಿಸಿದರು.
ರೇಸ್‌ನಲ್ಲಿ ಡಿಕೆಶಿ ಒಬ್ಬರೇ ಇಲ್ಲ, ಪಟ್ಟಿ ದೊಡ್ಡದಿದೆ
ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ವಿಚಾರವೆಂದರೆ, ಮುಂದಿನ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಗೆ ರಾಜಣ್ಣ ನೀಡಿರುವ ಉತ್ತರ. ಮಾಧ್ಯಮಗಳು ಮತ್ತು ರಾಜಕೀಯ ವಲಯದಲ್ಲಿ ಡಿಕೆ ಶಿವಕುಮಾರ್ ಅವರೇ ಮುಂದಿನ ಸಿಎಂ ಎಂದು ಬಿಂಬಿಸಲಾಗುತ್ತಿದೆ. ಆದರೆ ವಾಸ್ತವದಲ್ಲಿ ಚಿತ್ರಣ ಬೇರೆಯೇ ಇದೆ. ನಮ್ಮ ಪಕ್ಷದಲ್ಲಿ ಡಿಕೆ ಶಿವಕುಮಾರ್ ಒಬ್ಬರೇ ಸಮರ್ಥರಿಲ್ಲ. ಗೃಹ ಸಚಿವ ಡಾ. ಜಿ. ಪರಮೇಶ್ವರ್, ಹಿರಿಯ ನಾಯಕರಾದ ಎಂ.ಬಿ. ಪಾಟೀಲ್, ಆರ್.ವಿ. ದೇಶಪಾಂಡೆ, ಎಚ್.ಕೆ. ಪಾಟೀಲ್ ಸೇರಿದಂತೆ ಅನೇಕ ಹಿರಿಯರು ಮುಖ್ಯಮಂತ್ರಿ ರೇಸ್‌ನಲ್ಲಿದ್ದಾರೆ. ಕೇವಲ ಡಿಸಿಎಂ ಎಂಬ ಕಾರಣಕ್ಕೆ ಡಿಕೆಶಿ ಒಬ್ಬರೇ ಅರ್ಹರು ಎಂಬ ಭಾವನೆ ತಪ್ಪು ಎಂದು ರಾಜಣ್ಣ ಹೇಳುವ ಮೂಲಕ ಡಿಕೆಶಿ ಶಿಬಿರಕ್ಕೆ ನಡುಕ ಹುಟ್ಟಿಸಿದ್ದಾರೆ.
ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಡಿಕೆ ಶಿವಕುಮಾರ್ ಅವರ ಪಾತ್ರ ಹಿರಿದು ಎಂಬ ವಾದವನ್ನು ರಾಜಣ್ಣ ತಳ್ಳಿಹಾಕಿದ್ದಾರೆ. 2013ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಡಾ. ಜಿ. ಪರಮೇಶ್ವರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಹಾಗಾಗಿ ಪಕ್ಷದ ಗೆಲುವಿನಲ್ಲಿ ಅವರ ಶ್ರಮವೂ ಇದೆ. ಕೇವಲ ಒಬ್ಬ ವ್ಯಕ್ತಿಯಿಂದ ಪಕ್ಷ ಅಧಿಕಾರಕ್ಕೆ ಬಂದಿದೆ ಎನ್ನುವುದನ್ನು ನಾನು ಒಪ್ಪುವುದಿಲ್ಲ. ಅಧಿಕಾರಕ್ಕೆ ತರುವಲ್ಲಿ ಎಲ್ಲರ ಶ್ರಮವಿದ್ದು, ದಲಿತ ನಾಯಕ ಪರಮೇಶ್ವರ್ ಅವರನ್ನು ಸಹ ಸಿಎಂ ಸ್ಥಾನಕ್ಕೆ ಪರಿಗಣಿಸಬೇಕಾಗುತ್ತದೆ ಎಂದು ಹೇಳುವ ಮೂಲಕ ಡಿಕೆಶಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಸಿಎಂ ಮತ್ತು ಡಿಸಿಎಂ ಬದಲಾವಣೆ ಕುರಿತಾದ ನಿರಂತರ ಗೊಂದಲಗಳು ರಾಜ್ಯದ ಆಡಳಿತ ಯಂತ್ರದ ಮೇಲೆ ದುಷ್ಪರಿಣಾಮ ಬೀರುತ್ತಿವೆ ಎಂದು ರಾಜಣ್ಣ ಕಳವಳ ವ್ಯಕ್ತಪಡಿಸಿದ್ದಾರೆ. ಜನವರಿಯಲ್ಲಿ ಹೈಕಮಾಂಡ್ ನಾಯಕರನ್ನು ಕರೆದು ಮಾತನಾಡಬಹುದು ಅಥವಾ ಬಿಡಬಹುದು. ಆದರೆ, ಈ ಅನಿಶ್ಚಿತತೆಯ ವಾತಾವರಣವು ಅಧಿಕಾರಿಗಳು ಮತ್ತು ಆಡಳಿತದ ದಕ್ಷತೆಯನ್ನು ಕುಗ್ಗಿಸುತ್ತಿದೆ. ಆದ್ದರಿಂದ ಹೈಕಮಾಂಡ್ ತಕ್ಷಣವೇ ಮಧ್ಯಪ್ರವೇಶಿಸಿ ಈ ಗೊಂದಲಗಳಿಗೆ ತೆರೆ ಎಳೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಡಿಕೆಶಿ ಸಂಪುಟದಲ್ಲಿ ಕೆಲಸ ಮಾಡಲ್ಲ
ತಮ್ಮ ಹಳೆಯ ನಿಲುವಿಗೆ ಬದ್ಧರಾಗಿರುವ ರಾಜಣ್ಣ, ಒಂದು ವೇಳೆ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾದರೆ ಅವರ ಸಂಪುಟದಲ್ಲಿ ತಾನು ಸಚಿವನಾಗಿ ಕೆಲಸ ಮಾಡುವುದಿಲ್ಲ ಎಂದು ಪುನರುಚ್ಚರಿಸಿದ್ದಾರೆ. ಈ ಮೂಲಕ ರಾಜ್ಯ ಕಾಂಗ್ರೆಸ್‌ನಲ್ಲಿನ ಒಳಜಗಳ ಮತ್ತು ಬಣ ರಾಜಕೀಯ ಇನ್ನೂ ಜೀವಂತವಾಗಿದೆ ಎಂಬ ಸಂದೇಶವನ್ನು ರಾಜಣ್ಣ ರವಾನಿಸಿದ್ದಾರೆ.








