ಮಡಿಕೇರಿ: ವಯನಾಡಿನಲ್ಲಿ ಜನರ ಆಕ್ರಂದನ ಮುಗಿಲು ಮುಟ್ಟಿದೆ. ತಮ್ಮವರನ್ನು ಕಳೆದುಕೊಂಡ ದುಃಖ ಅಲ್ಲಿನವರಿಗೆ ತಡೆದುಕೊಳ್ಳಲಾಗುತ್ತಿಲ್ಲ. ಕರ್ನಾಟಕದ ಹಲವರು ಕೂಡ ಈ ಜಲಪ್ರಳಯಕ್ಕೆ (Wayanad Landslide) ಬಲಿಯಾಗಿದ್ದಾರೆ. ಕೊಡಗು (Kodagu) ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬಾಲಕ ಸಾವನ್ನಪ್ಪಿದ್ದು, ಆಕ್ರಂದನ ಮುಗಿಲು ಮುಟ್ಟಿದೆ.
ಕೊಡಗಿನ ಗುಹ್ಯ ಗ್ರಾಮದ ರೋಹಿತ್(9) ಸಾವನ್ನಪ್ಪಿದ ದುರ್ದೈವ ಬಾಲಕ. ಪಳ್ಳಕ್ಕರೆ ಗೇಟ್ ಸಮೀಪದ ಖಾಸಗಿ ತೋಟದ ಲೈನ್ ಮನೆಯಲ್ಲಿ ರವಿ ಹಾಗೂ ಕವಿತಾ ದಂಪತಿ ತನ್ನ ಮೂವರು ಗಂಡು ಮಕ್ಕಳೊಂದಿಗೆ ವಾಸಿಸುತ್ತಿದ್ದರು. ಆದರೆ, ಒಂದು ತಿಂಗಳ ಹಿಂದೆ ಕವಿತಾ ತನ್ನ ಕಿರಿಯ ಮಗ ರೋಹಿತ್ ಜೊತೆ ವಯನಾಡುವಿನ ಮೆಪ್ಪಾಡಿಯಲ್ಲಿರುವ ಅಕ್ಕನ ಮನೆಗೆ ಹೋಗಿದ್ದರು. ಆನಂತರ ಕವಿತಾ ತನ್ನ ಮಗನನ್ನು ಅಕ್ಕನ ಮನೆಯಲ್ಲಿಯೇ ಬಿಟ್ಟು ಕ್ಯಾಲಿಕಟ್ ನಲ್ಲಿರುವ ಮನೆಯೊಂದರ ಕೆಲಸಕ್ಕೆ ತೆರಳಿದ್ದರು.
ಆದರೆ, ಈಗ ರೋಹಿತ್ ತನ್ನ ಪ್ರಾಣ ಕಳೆದುಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ರೋಹಿತ್ ತಂದೆ ವಯಾನಿಡಿಗೆ ತೆರಳಿದ್ದಾರೆ. ಮಗ ಕಾಣೆಯಾದ ವಿಷಯವನ್ನು ಗ್ರಾಮದಲ್ಲಿ ಹೇಳಿ ಹೋಗಿದ್ದಾರೆ ಎನ್ನಲಾಗಿದೆ.








