ಬೆಳಗಾವಿ : ಚಳಿಗಾಲದ ಅಧಿವೇಶನದ ಕಾವು ಒಂದೆಡೆಯಾದರೆ, ರಾಜ್ಯ ಕಾಂಗ್ರೆಸ್ ಸರ್ಕಾರದ ನಾಯಕತ್ವ ಬದಲಾವಣೆಯ ಚರ್ಚೆ ಇನ್ನೊಂದೆಡೆ ಜೋರಾಗಿದೆ. ಸಿದ್ದರಾಮಯ್ಯನವರು ಸಿಎಂ ಸ್ಥಾನದಿಂದ ಕೆಳಗಿಳಿಯುತ್ತಾರೆಯೇ? ಡಿಕೆ ಶಿವಕುಮಾರ್ ಅವರಿಗೆ ಪಟ್ಟ ಸಿಗಲಿದೆಯೇ? ಅಥವಾ ಮೂರನೇ ವ್ಯಕ್ತಿ ಅಧಿಕಾರ ಹಿಡಿಯಲಿದ್ದಾರೆಯೇ? ಎಂಬ ಪ್ರಶ್ನೆಗಳಿಗೆ ಉತ್ತರ ಸಿಗದೆ ಜನಸಾಮಾನ್ಯರು ಗೊಂದಲದಲ್ಲಿದ್ದಾರೆ. ಈ ಅನಿಶ್ಚಿತತೆಯ ನಡುವೆಯೇ, ತಮ್ಮ ನಿಖರ ಭವಿಷ್ಯವಾಣಿಗೆ ಹೆಸರಾದ ಹಾಸನ ಜಿಲ್ಲೆಯ ಅರಸೀಕೆರೆ ಹಾರನಹಳ್ಳಿ ಕೋಡಿಮಠದ ಶ್ರೀ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ರಾಜ್ಯ ರಾಜಕಾರಣದ ಬಗ್ಗೆ ಸ್ಫೋಟಕ ಹಾಗೂ ಮಾರ್ಮಿಕ ಭವಿಷ್ಯ ನುಡಿದಿದ್ದಾರೆ.
ಒಳಹಡ್ಡ ಬಂದಿದೆ, ಸಂಕ್ರಾಂತಿಗೆ ಸುಖಾಂತ್ಯ
ರಾಜ್ಯ ರಾಜಕಾರಣದ ಪ್ರಸ್ತುತ ವಿದ್ಯಮಾನಗಳ ಬಗ್ಗೆ ಮಾತನಾಡಿದ ಕೋಡಿಮಠದ ಶ್ರೀಗಳು, ತಮ್ಮದೇ ಆದ ಒಗಟಿನ ಶೈಲಿಯಲ್ಲಿ ಭವಿಷ್ಯ ನುಡಿದಿದ್ದಾರೆ. ಸಂಗಮೇಶನು ಅರಿವನೆ, ಆದರೆ ಒಳಹಡ್ಡ ಬಂದಿದೆ. ಶಿವನ ಮುಡಿಯ ಎರಡು ದುಂಡು ಮಲ್ಲಿಗೆಗಳು ಶಿವನ ಬಲಪಾದ ಸೇರಿಯಾವು. ಮುಂದೆ ಸುಖ್ಯಾಂತ್ಯವಾಗಲಿದೆ ಎಂದು ಶ್ರೀಗಳು ಹೇಳಿದ್ದಾರೆ.
ಇದರ ಅರ್ಥವೇನೆಂದರೆ, ಸದ್ಯದ ಪರಿಸ್ಥಿತಿಯಲ್ಲಿ ಆಂತರಿಕ ಅಡೆತಡೆಗಳು (ಒಳಹಡ್ಡ) ಎದುರಾಗಿವೆ. ಆದರೆ ಅಂತಿಮವಾಗಿ ಎಲ್ಲವೂ ಒಂದು ತಾರ್ಕಿಕ ಅಂತ್ಯಕ್ಕೆ ಬರಲಿದೆ. ಮಕರ ಸಂಕ್ರಾಂತಿ ಮತ್ತು ರಾಜ್ಯ ಬಜೆಟ್ ಮಂಡನೆಯ ನಂತರ ಕರ್ನಾಟಕ ರಾಜಕೀಯದಲ್ಲಿ ದೊಡ್ಡ ಮಟ್ಟದ ಬದಲಾವಣೆಗಳಾಗಲಿದ್ದು, ಅದು ಒಂದು ಸುಖಾಂತ್ಯವನ್ನು ಕಾಣಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಆ ಸುಖಾಂತ್ಯ ಯಾರ ಪರವಾಗಿ ಆಗಲಿದೆ ಎಂಬ ಗುಟ್ಟನ್ನು ಮಾತ್ರ ಅವರು ಬಿಟ್ಟುಕೊಟ್ಟಿಲ್ಲ.
ಸಂಕ್ರಾಂತಿಗೂ ರಾಜಕೀಯಕ್ಕೂ ಏನು ಸಂಬಂಧ?
ಭಾರತೀಯ ಸಂಸ್ಕೃತಿಯಲ್ಲಿ ಭವಿಷ್ಯ ನಂಬಿಕೆ ಹಾಸುಹೊಕ್ಕಾಗಿದೆ ಎಂದ ಶ್ರೀಗಳು, ಕಾಲಕಾಲಕ್ಕೆ ಬರುವ ಹಬ್ಬಗಳಿಗೂ ಭವಿಷ್ಯಕ್ಕೂ ಇರುವ ನಂಟನ್ನು ವಿವರಿಸಿದ್ದಾರೆ. ಯುಗಾದಿಯ ನಂತರ ಹೇಳುವ ಭವಿಷ್ಯವು ನಾಡಿನ ಮಳೆ, ಬೆಳೆ, ಜನಜೀವನ ಮತ್ತು ಆರೋಗ್ಯದ ಮೇಲೆ ಬೆಳಕು ಚೆಲ್ಲುತ್ತದೆ. ಆದರೆ, ಮಕರ ಸಂಕ್ರಾಂತಿಯ ನಂತರ ಬರುವ ಭವಿಷ್ಯವು ವ್ಯಾಪಾರಸ್ಥರಿಗೆ ಮತ್ತು ಆಳುವ ದೊರೆಗಳಿಗೆ (ರಾಜಕಾರಣಿಗಳಿಗೆ) ಅನ್ವಯವಾಗುತ್ತದೆ. ಹೀಗಾಗಿ, ರಾಜ್ಯ ರಾಜಕೀಯದ ಮುಂದಿನ ಹಾದಿ ಸಂಕ್ರಾಂತಿಯ ನಂತರವೇ ನಿರ್ಧಾರವಾಗಲಿದೆ ಎಂದು ಶ್ರೀಗಳು ಸ್ಪಷ್ಟಪಡಿಸಿದ್ದಾರೆ.
ಬಲವಂತದಿಂದ ರಾಜನನ್ನು ಇಳಿಸಲು ಸಾಧ್ಯವಿಲ್ಲ
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪದತ್ಯಾಗದ ಬಗ್ಗೆ ಕೇಳಿಬರುತ್ತಿರುವ ಮಾತುಗಳಿಗೆ ಶ್ರೀಗಳು ಪರೋಕ್ಷವಾಗಿ ಉತ್ತರಿಸಿದ್ದಾರೆ. ಹಾಲು ಕೆಟ್ಟರೂ ಹಾಲುಮತ ಕೆಡುವುದಿಲ್ಲ. ಆ ಸಮುದಾಯದ ಕೊಡುಗೆ ಸಮಾಜಕ್ಕೆ ಅಪಾರವಾಗಿದೆ. ನಾಡಿನ ಈಗಿನ ದೊರೆಗಳು ಸ್ವತಃ ಮನಸ್ಸು ಮಾಡಿ ಅಧಿಕಾರ ಬಿಡಬೇಕೇ ಹೊರತು, ಯಾರೋ ಬಲವಂತ ಮಾಡಿದರು ಎಂದು ಅವರನ್ನು ಕುರ್ಚಿ ಇಳಿಸಲು ಅಸಾಧ್ಯ ಎಂದು ಕೋಡಿಶ್ರೀಗಳು ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ. ಇದು ಸಿದ್ದರಾಮಯ್ಯನವರ ಬೆಂಬಲಿಗರಲ್ಲಿ ಹೊಸ ಹುರುಪು ಮೂಡಿಸಿದೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿಯಾಗುವ ಯೋಗವಿದೆಯೇ ಎಂಬ ನೇರ ಪ್ರಶ್ನೆಗೆ ಕೋಡಿಶ್ರೀಗಳು ಒಂದು ಜಾನಪದ ಕಥೆಯ ಮೂಲಕ ಮಾರ್ಮಿಕ ಉತ್ತರ ನೀಡಿದ್ದಾರೆ.
ಬೇಡನೊಬ್ಬನು ಜಿಂಕೆಯನ್ನು ಅಟ್ಟಿಸಿಕೊಂಡು ಬಂದಾಗ, ಅಲ್ಲಿ ಕುಳಿತಿದ್ದ ಸನ್ಯಾಸಿಯನ್ನು ಜಿಂಕೆ ಬಂತಾ ಎಂದು ಕೇಳಿದನಂತೆ. ಆಗ ಸನ್ಯಾಸಿ, ಕಣ್ಣು ನೋಡಿತು ಆದರೆ ಅದಕ್ಕೆ ಮಾತು ಬರುವುದಿಲ್ಲ, ಬಾಯಿ ಮಾತನಾಡುತ್ತದೆ ಆದರೆ ಅದಕ್ಕೆ ಕಣ್ಣು ಕಾಣುವುದಿಲ್ಲ. ನಾನೇನು ಹೇಳಲಿ ಎಂದನಂತೆ. ಈ ಕಥೆಯನ್ನು ಉಲ್ಲೇಖಿಸುವ ಮೂಲಕ, ಸದ್ಯಕ್ಕೆ ಅಧಿಕಾರ ಹಸ್ತಾಂತರದ ಬಗ್ಗೆ ಖಚಿತವಾಗಿ ಏನನ್ನೂ ಹೇಳಲು ಸಾಧ್ಯವಿಲ್ಲ, ಪರಿಸ್ಥಿತಿ ಅನಿಶ್ಚಿತವಾಗಿದೆ ಎಂಬ ಪರೋಕ್ಷ ಸುಳಿವನ್ನು ಶ್ರೀಗಳು ನೀಡಿದ್ದಾರೆ.
ಕೇವಲ ರಾಜಕೀಯವಲ್ಲದೆ, ಮುಂದಿನ ದಿನಗಳ ಪ್ರಾಕೃತಿಕ ವಿಕೋಪಗಳ ಬಗ್ಗೆಯೂ ಶ್ರೀಗಳು ಎಚ್ಚರಿಕೆ ನೀಡಿದ್ದಾರೆ. ಮುಂಬರುವ 2026ರಲ್ಲಿ ವರುಣ (ಮಳೆ) ಮತ್ತು ಅಗ್ನಿಯ (ಬೆಂಕಿ) ಅಟ್ಟಹಾಸ ಹೆಚ್ಚಿರಲಿದೆ. ದೇಶದ ಜನತೆಗೆ ಅಶಾಂತಿ ಮತ್ತು ಅಭದ್ರತೆ ಕಾಡುವ ಸಾಧ್ಯತೆಯಿದೆ ಎಂದು ಅವರು ಆತಂಕಕಾರಿ ಭವಿಷ್ಯ ನುಡಿದಿದ್ದಾರೆ.
ಒಟ್ಟಾರೆಯಾಗಿ, ಕೋಡಿಮಠದ ಶ್ರೀಗಳ ಈ ಭವಿಷ್ಯವಾಣಿ ರಾಜ್ಯ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಗ್ರಾಸವಾಗಿದ್ದು, ಸಂಕ್ರಾಂತಿ ಹಬ್ಬದ ನಂತರ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಮಹತ್ತರ ಬದಲಾವಣೆಗಳು ಆಗಲಿವೆಯೇ ಎಂದು ಕಾದು ನೋಡಬೇಕಿದೆ.







