ಬೆಂಗಳೂರಿನ ಕೋಗಿಲು ಲೇಔಟ್ನಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಮನೆಗಳನ್ನು ಸರ್ಕಾರ ತೆರವುಗೊಳಿಸಿದ ಹಿನ್ನೆಲೆ, ನಿರಾಶ್ರಿತರಾದ ನಿವಾಸಿಗಳಿಗೆ ಯೋಗ್ಯ ಪುನರ್ವಸತಿ ಮತ್ತು ಪರಿಹಾರ ಒದಗಿಸಬೇಕು ಎಂದು ಕೋರಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಜನವರಿ 22ಕ್ಕೆ ಮುಂದೂಡಿದೆ.
ಈ ಅರ್ಜಿಯನ್ನು ಜೈಬಾ ತಬಸ್ಸುಮ್ ಹಾಗೂ ಇತರರು ಸಲ್ಲಿಸಿದ್ದು, ಈ ಲೇಔಟ್ನಲ್ಲಿ ಕಳೆದ ಸುಮಾರು 28 ವರ್ಷಗಳಿಂದ ನೂರಾರು ಕುಟುಂಬಗಳು ವಾಸಿಸುತ್ತಿದ್ದವು ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಯಾವುದೇ ರೀತಿಯ ಮುನ್ಸೂಚನೆ ಅಥವಾ ಪೂರ್ವ ಮಾಹಿತಿ ನೀಡದೆ, ಏಕಾಏಕಿ ಮನೆಗಳನ್ನು ತೆರವುಗೊಳಿಸಲಾಗಿದೆ, ಇದರಿಂದ ಅನೇಕ ಕುಟುಂಬಗಳು ಬೀದಿಗೆ ಬಿದ್ದಿವೆ ಎಂದು ಅವರು ವಾದಿಸಿದ್ದಾರೆ.
ಅರ್ಜಿದಾರರ ಪರ ವಕೀಲರು, ಸರ್ಕಾರ ಮಾನವೀಯ ದೃಷ್ಟಿಕೋನದಿಂದ ನಡೆದುಕೊಳ್ಳಬೇಕು ಹಾಗೂ ಸುದೀರ್ಘ ಕಾಲದಿಂದ ವಾಸಿಸುತ್ತಿದ್ದ ಜನರಿಗೆ ಪರ್ಯಾಯ ವಸತಿ, ಪರಿಹಾರ ಮತ್ತು ಪುನರ್ವಸತಿ ವ್ಯವಸ್ಥೆ ಮಾಡುವುದು ಸರ್ಕಾರದ ಜವಾಬ್ದಾರಿ ಎಂದು ಒತ್ತಾಯಿಸಿದ್ದಾರೆ.
ಈ ಕುರಿತು ರಾಜ್ಯ ಸರ್ಕಾರದ ಪರ ವಕೀಲರು ತಮ್ಮ ಪ್ರತಿಕ್ರಿಯೆ ಸಲ್ಲಿಸಲು ಸಮಯ ಕೋರಿದ ಹಿನ್ನೆಲೆಯಲ್ಲಿ, ನ್ಯಾಯಾಲಯ ವಿಚಾರಣೆಯನ್ನು ಮುಂದೂಡಿಕೆ ಮಾಡಿ ಜನವರಿ 22ಕ್ಕೆ ಮುಂದಿನ ದಿನಾಂಕ ನಿಗದಿ ಮಾಡಿದೆ. ಈ ಪ್ರಕರಣವು ನಗರದಲ್ಲಿನ ಅಕ್ರಮ ವಸತಿ ತೆರವು ಹಾಗೂ ಪುನರ್ವಸತಿ ನೀತಿಗಳ ಕುರಿತು ಮತ್ತೊಮ್ಮೆ ಸಾರ್ವಜನಿಕ ಚರ್ಚೆಗೆ ಕಾರಣವಾಗಿದ್ದು, ಮುಂದಿನ ವಿಚಾರಣೆ ಮಹತ್ವ ಪಡೆದುಕೊಳ್ಳಲಿದೆ.








