ವಿಶ್ವದಾದ್ಯಂತ ಕೊರೊನಾ ಸೋಂಕಿನ ಭೀತಿಯಿಂದ ಲಾಕ್ ಡೌನ್ ಜಾರಿಯಲ್ಲಿದ್ದು, ಕ್ರಿಕೆಟಿಗರು ತಮ್ಮ ಮನೆಗಳಲ್ಲಿ ಕಾಲ ಕಳೆಯುತ್ತಿದ್ದಾರೆ. ಕ್ರಿಕೆಟ್ ಟೂರ್ನಿಗಳಿಲ್ಲದೆ ಕ್ರಿಕೆಟಿಗರು ಮನೆಯಲ್ಲಿ ಹೇಗೆ ಸಮಯ ಕಳೆಯುತ್ತಿದ್ದಾರೆ ಎಂಬ ಕುತೂಹಲ ಅವರ ಅಭಿಮಾನಿಗಳಲ್ಲಿ ಮನೆಮಾಡಿದೆ. ಈ ನಡುವೆ ಲಾಕ್ ಡೌನ್ ಸಮಯದಲ್ಲಿ ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹೇಗೆ ಸಮಯ ಕಳೆಯುತ್ತಿದ್ದಾರೆ ಎಂಬ ಬಗ್ಗೆ ಅವರ ಪತ್ನಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ವೀಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಅನುಷ್ಕಾ ಶರ್ಮಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಅನಿವಾರ್ಯತೆ ಹೊಂದಿರುವ ಈ ಸಮಯದಲ್ಲಿ ಪತಿ ಕ್ರಿಕೆಟ್ ಪಂದ್ಯಗಳ ವಾತಾವರಣದಿಂದ ಹೇಗೆ ವಂಚಿತರಾಗಿದ್ದಾರೆ ಎಂದು ತಿಳಿಸಲು ವೀಡಿಯೋವನ್ನು ಹಂಚಿಕೊಂಡಿದ್ದು, ಜೊತೆಗೆ ಕೊಹ್ಲಿ ಮೈದಾನದಲ್ಲಿ ಕ್ರಿಕೆಟ್ ಆಡುವುದನ್ನು ಅವರ ಅಭಿಮಾನಿಗಳು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಂದು ನಾನು ಭಾವಿಸಿರುವೆ. ಲಕ್ಷಾಂತರ ಅಭಿಮಾನಿಗಳಿಂದ ಅವರು ಪಡೆಯುವ ಪ್ರೀತಿಯನ್ನು ಕಳೆದು ಕೊಂಡಿರುವ ಜೊತೆಗೆ, ಅವರು ವಿಶೇಷವಾಗಿ ಈ ಒಂದು ನಿರ್ದಿಷ್ಟ ರೀತಿಯ ಅಭಿಮಾನಿಯನ್ನು ಸಹ ಕಳೆದುಕೊಂಡಿರಬಹುದು. ಹಾಗಾಗಿ ಅಭಿಮಾನಿಯಾಗಿ ನಾನು ಅವರಿಗೆ ಆ ಅನುಭವವನ್ನು ನೀಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಅನುಷ್ಕಾ ಅವರು ವಿಡಿಯೋದಲ್ಲಿ ಕೊಹ್ಲಿ ಅವರನ್ನು ಜೋರಾಗಿ ಕೂಗುತ್ತಾ, ‘ಕೊಹ್ಲಿ, ಹೇ ಕೊಹ್ಲಿ… ಕೊಹ್ಲಿ… ಚೌಕಾ ಮಾರ್ ನಾ, ಚೌಕಾ…. ಕ್ಯಾ ಕರ್ ರಾಹಾ ಹೈ… ಹೇ ಚೌಕಾ ಮಾರ್ ( ಕೊಹ್ಲಿ, ಹೇ ಕೊಹ್ಲಿ.. ಕೊಹ್ಲಿ.. ಬೌಂಡರಿ ಬಾರಿಸಿ.. ಬೌಂಡರಿ.. ನೀವು ಏನು ಮಾಡುತ್ತಿದ್ದೀರಿ.. ಬೌಂಡರಿ ಬಾರಿಸಿ)’ ಎಂದು ಹೇಳಿಕೊಂಡಿದ್ದಾರೆ.
https://www.instagram.com/p/B_EwaTjJL-G/
ಅನುಷ್ಕಾ ಶರ್ಮಾ ಅವರ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಜೊತೆಗೆ ಅನುಷ್ಕಾ ಶರ್ಮಾ ಅವರ ಬುದ್ಧಿವಂತಿಕೆಯ ಬಗ್ಗೆ ಅಭಿಮಾನಿಗಳು ತಮ್ಮದೆ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ದೇಶಾದ್ಯಂತ ಲಾಕ್ಡೌನ್ ಆದೇಶ ಜಾರಿಯಲ್ಲಿರುವ ಈ ಸಮಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ವಿರಾಟ್ ಮತ್ತು ಅನುಷ್ಕಾ ಜೋಡಿ ಈ ಮೊದಲು ಕೋವಿಡ್-19 ಸೋಂಕಿನಿಂದ ಸುರಕ್ಷಿತರಾಗಿರಲು ಸಂಬಂಧಿಸಿದಂತೆ ಜಾಗೃತಿ ಸಂದೇಶಗಳನ್ನು ಹಂಚಿಕೊಂಡಿದ್ದರು. ಅಷ್ಟೇ ಅಲ್ಲ ವೀಡಿಯೋ ಮೂಲಕ ಕೂಡ ವಿರುಷ್ಕಾ ಜೋಡಿ ತಮ್ಮ ಅಭಿಮಾನಿಗಳಿಗೆ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಿದ್ದರು. ಲಾಕ್ ಡೌನ್ ನಡುವೆ ಪತಿ ವಿರಾಟ್ ಕೊಹ್ಲಿಯ ಹೇರ್ ಕಟಿಂಗ್ ಮಾಡಿ ಅನುಷ್ಕಾ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಅದರ ಫೋಟೋಗಳನ್ನು ಹಂಚಿಕೊಂಡಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳನ್ನು ಮಾತನಾಡಿಸಲು ಆಗಾಗ ಲೈವ್ ವಿಡಿಯೋ ಬರುವ
ನಟಿ ಅನುಷ್ಕಾ ಶರ್ಮಾ ಇತ್ತೀಚೆಗೆ ಲಾಕ್ ಡೌನ್ ಸಮಯದಲ್ಲಿ ಆಹಾರವಿಲ್ಲದೆ ಬಳಲುತ್ತಿರುವವರ ಕಷ್ಟ ತಿಳಿದು ತೀವ್ರ ಬೇಸರ ವ್ಯಕ್ತಪಡಿಸಿದ್ದರು. ಕೊರೋನಾ ಸೋಂಕಿನಿಂದಾಗಿ ನಮ್ಮನ್ನು ಕಾಪಾಡಲು ತಮ್ಮ ಜೀವ ಒತ್ತೆ ಇಟ್ಟಿರುವ ವೈದ್ಯಕೀಯ ಸಿಬ್ಬಂದಿಗಳನ್ನು, ರೋಗಿಗಳನ್ನು ನೋಡುವಾಗ ಬಹಳ ನೋವಾಗುತ್ತದೆ. ಇಂತಹ ಸಂದರ್ಭದಲ್ಲಿ ತಮ್ಮ ಸುರಕ್ಷತೆಯ ಜೊತೆಗೆ ಇತರರ ಸುರಕ್ಷತೆಯ ಬಗ್ಗೆಯೂ ಕಾಳಜಿ ವಹಿಸುವಂತೆ ಅಭಿಮಾನಿಗಳಿಗೆ ಕಿವಿಮಾತು ಹೇಳಿದ್ದರು.
ಕೊರೊನಾ ವೈರಸ್ ವಿರುದ್ಧ ಹೋರಾಡಲು ಕೇಂದ್ರ ಸರ್ಕಾರದ ಜೊತೆ ಕೈಜೋಡಿಸಿದ ನಟಿ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ದಂಪತಿ, ಇತ್ತೀಚೆಗೆ ಪಿಎಂ ಕೇರ್ ಫಂಡ್ ಗೆ ದೇಣಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದರು.








