ನವದೆಹಲಿ: ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿದ್ದು, ಸದ್ಯ ಸೋಂಕಿತರ ಸಂಖ್ಯೆ 83ಕ್ಕೆ ಏರಿಕೆಯಾಗಿದೆ. ಸೋಂಕು ಮತ್ತಷ್ಟು ಹರಡದಿರಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಕಷ್ಟು ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಂಡಿದ್ದು, ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ಕೆ ಮುಂದಾಗಿವೆ. ಇದಕ್ಕೆ ಈಗ ಟೀಂ ಇಂಡಿಯಾದ ಸ್ಟಾರ್ ಆಟಗಾರರು ಕೈ ಜೋಡಿಸಿದ್ದು, ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಕನ್ನಡಿಗ ಕೆ.ಎಲ್ ರಾಹುಲ್ ಜನರಿಗೆ ಧೈರ್ಯ ತುಂಬಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ವಿರಾಟ್ ಕೊಹ್ಲಿ, ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವ ಮೂಲಕ ಬಲವಾಗಿ ಉಳಿದುಕೊಂಡು ಸ್ಫೋಟಗೊಂಡಿರುವ ಕರೊನಾ ವೈರಸ್ ವಿರುದ್ಧ ಹೋರಾಡಿ. ಸುರಕ್ಷಿತವಾಗಿ ಉಳಿಯಿರಿ, ಜಾಗೃತರಾಗಿರಿ ಮತ್ತು ರೋಗ ಬರದಂತೆ ತಡೆಯುವುದು ಚಿಕಿತ್ಸೆಗಿಂತಲೂ ಉತ್ತಮ ಎಂಬುದನ್ನು ಬಹು ಮುಖ್ಯವಾಗಿ ನೆನಪಿನಲ್ಲಿಡಿ. ಎಲ್ಲರೂ ರಕ್ಷಣೆಯ ಕಡೆಗೆ ಗಮನಕೊಡಿ ಎಂದು ಮನವಿ ಮಾಡಿದ್ದಾರೆ.
ಇನ್ನು ರಾಹುಲ್ ಟ್ವಿಟ್ಟರ್ ನಲ್ಲಿ ಸೋಂಕಿನ ಪರೀಕ್ಷಾ ಸಮಯದಲ್ಲಿ ಎಲ್ಲರೂ ಬಲವಾಗಿ ಉಳಿದುಕೊಂಡು ಒಬ್ಬರಿಗೊಬ್ಬರು ರಕ್ಷಣೆ ಮಾಡಿಕೊಳ್ಳಿ. ಆರೋಗ್ಯ ಪರಿಣಿತರು ನೀಡುವ ಸಲಹೆಗಳನ್ನು ಚಾಚೂ ತಪ್ಪದೇ ಪಾಲಿಸಿ ಮತ್ತು ಕರೊನಾ ವೈರಸ್ ನಿಂದ ಸುರಕ್ಷಿತವಾಗಿರಿ ಎಂದು ಬರೆದುಕೊಂಡಿದ್ದಾರೆ.
ಕಿಲ್ಲರ್ ಕೊರೊನಾ ಕರಿನೆರಳು ಕ್ರಿಕೆಟ್ ಮೇಲೂ ಬೀರಿದ್ದು, ಭಾರತ, ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಸರಣಿಯನ್ನು ರದ್ದು ಮಾಡಲಾಗಿದೆ. ಇದಲ್ಲದೆ ಮಾರ್ಚ್ 26ರಿಂದ ಆರಂಭವಾಗಬೇಕಿದ್ದ ಐಪಿಎಲ್ ಏಪ್ರಿಲ್ 15ಕ್ಕೆ ಮುಂದೂಡಲಾಗಿದ್ದು, ಇದು ರದ್ದಾಗುವ ಸಾಧ್ಯತೆಗಳಿವೆ.