ನಾಲ್ವರು ಸೋಂಕಿತರ ಸಾವಿನ ಬೆನ್ನಲ್ಲೇ , ಕೋಲಾರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಡಿಸಿಎಂ ಅಶ್ವತ್ಥ್ ನಾರಾಯಣ್..!
ಕೋಲಾರ: ಕೋಲಾರದಲ್ಲಿ ಎಸ್.ಎನ್.ಆರ್ ಜಿಲ್ಲಾ ಆಸ್ಪತ್ರೆಯಲ್ಲಿ ಆಮ್ಲಜನಕದ ಸಮಸ್ಯೆ ಉಂಟಾಗಿ ಸೋಮವಾರ ರಾತ್ರಿ ನಾಲ್ವರು ಸಾವನ್ನಪ್ಪಿದ ಬೆನ್ನಲ್ಲೇ ಜಿಲ್ಲೆಗೆ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು, ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೋವಿಡ್ ಎರಡನೇ ಅಲೆಯಿಂದ ಜಿಲ್ಲೆಯೂ ಸಾಕಷ್ಟು ಸಮಸ್ಯೆಗೀಡಾಗಿದ್ದು ಆಮ್ಲಜನಕ, ರೆಮಿಡಿಸ್ವಿರ್, ಐಸಿಯು ಹಾಸಿಗೆಗಳು, ವೆಂಟಿಲೇಟರ್, ರಿಮೋಟ್ ಐಸಿಯು, ಕೋವಿಡ್ ಪರೀಕ್ಷೆ, ಫಲಿತಾಂಶ ಮತ್ತಿತರೆ ಸೌಲಭ್ಯಗಳ ಬಗ್ಗೆ ಅವರು ಪರಿಶೀಲನೆ ಮಾಡಿದರಲ್ಲದೆ, ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದರು. ಜತೆಗೆ, ಆಸ್ಪತ್ರೆ ಹಾಗೂ ಕೋವಿಡ್ ವಾರ್ ರೂಂನಲ್ಲಿರುವ ಕೊರತೆಗಳ ಬಗ್ಗೆಯೂ ಮಾಹಿತಿ ಪಡೆದುಕೊಂಡರು. ಜತೆಗೆ, ವಾರ್ ರೂಮ್ ಸಿಬ್ಬಂದಿ ಜತೆ ಸಮಾಲೋಚನೆಯನ್ನೂ ನಡೆಸಿದರು.
ಕೋಲಾರದಲ್ಲಿರುವ ಡಿಜಿಟಲ್ ಅರೋಗ್ಯ ವಾಹಿನಿಯಲ್ಲಿರುವ ಕೋವಿಡ್ ವಾರ್ ರೂಮಿಗೆ ಭೇಟಿ ನೀಡಿದರಲ್ಲದೆ, ಎರಡನೇ ಅಲೆ ತಡೆಗಟ್ಟುತ್ತಿರುವ ವಿಧಾನವನ್ನು ಪರಿಶೀಲಿಸಿದರು. ಮನೆಯಲ್ಲೇ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆಯುತ್ತಿರವವರ ಬಗ್ಗೆ ಮಾಹಿತಿ ಪಡೆದರಲ್ಲದೆ, ಅವರಿಗೆ ನೀಡಲಾಗುತ್ತಿರುವ ಚಿಕಿತ್ಸೆ, ಅದನ್ನು ಮತ್ತಷ್ಟು ಉತ್ತಮಪಡಿಸುವ ಬಗ್ಗೆ ವೈದ್ಯರಿಗೆ ಸಲಹೆ ನೀಡಿದರು.








