ಕೋಲಾರ : ಜಿಲ್ಲಾಸ್ಪತ್ರೆಯಲ್ಲಿ ಹಾಸಿಗೆಗಳ ಪ್ರಮಾಣ ಹೆಚ್ಚಿಸಲು ಕ್ರಮ – ಡಿಸಿಎಂ
ಕೋಲಾರ: ಕೋಲಾರದಲ್ಲಿ ಎಸ್.ಎನ್.ಆರ್ ಜಿಲ್ಲಾ ಆಸ್ಪತ್ರೆಯಲ್ಲಿ ಆಮ್ಲಜನಕದ ಸಮಸ್ಯೆ ಉಂಟಾಗಿ ಸೋಮವಾರ ರಾತ್ರಿ ನಾಲ್ವರು ಸಾವನ್ನಪ್ಪಿದ ಬೆನ್ನಲ್ಲೇ ಜಿಲ್ಲೆಗೆ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು, ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಆಮ್ಲಜನಕ ಪೂರೈಕೆ ಬಗ್ಗೆ ಪರಿಶೀಲನೆ ನಡಸಿದ್ದೇನೆ. ಎಸ್ಎನ್ಆರ್ ಆಸ್ಪತ್ರೆಯಲ್ಲಿ ಒಂದು ಜಂಬೋ ಸಿಲಿಂಡರ್, ಒಂದು ಡ್ಯೂರಾ ಸಿಲಿಂಡರ್ ಇದೆ. ಅವುಗಳ ಸಂಗ್ರಹ ಪ್ರಮಾಣ 6 ಸಾವಿರ ಲೀಟರ್ಗೆ ಹೆಚ್ಚಿಸಲು ಸೂಚಿಸಿದ್ದೇನೆ. ಐಸಿಯುಗೆ ಪ್ರತ್ಯೇಕ ಪೈಪ್ಲೈನ್ ಮಾಡಲಾಗುವುದು, ಈಗಿರುವ ಪೈಪ್ಲೈನ್ಗೆ 60 ಪಾಯಿಂಟ್ಸ್ ಕ್ಯಾರಿ ಮಾಡುವ ಸಾಮರ್ಥ್ಯ ಇದೆ. ಅದನ್ನು 200 ಪಾಯಂಟ್ಸ್ ಪ್ರಮಾಣಕ್ಕೆ ಹೆಚ್ಚಿಸಲಾಗುವುದು ಎಂದರು.
ಅಲ್ಲದೇ ಆಸ್ಪತ್ರೆಯಲ್ಲಿ ಹಾಸಿಗೆಗಳ ಪ್ರಮಾಣ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು. ಈಗ ಆಸ್ಪತ್ರೆಯಲ್ಲಿ 500 ಬೆಡ್ಗಳಿವೆ. ಅದರಲ್ಲಿ 100 ಹಾಸಿಗೆಗಳನ್ನು ಮಕ್ಕಳು, ತಾಯಂದಿರಿಗೆ ಮೀಸಲು ಇಡಲಾಗಿದೆ. ಆರ್.ಎಲ್.ಜಾಲಪ್ಪ ಆಸ್ಪತ್ರೆಯಲ್ಲೂ ಆಕ್ಸಿಜನ್ ಬೆಡ್ಗಳನ್ನು ಹೆಚ್ಚಿಸಲಾಗುವುದು. ಜಿಲ್ಲಾಸ್ಪತ್ರೆಯಲ್ಲಿ ರೆಮಿಡಿಸ್ವೀರ್ ಸೇರಿ ಸಾಕಷ್ಟು ಔಷಧಿ ಸಂಗ್ರಹ ಇದೆ.
ಅಗತ್ಯವಾದರೆ ಖಾಸಗಿ ಆಸ್ಪತ್ರೆಯವರು ಆನ್ಲೈನ್ನಲ್ಲಿ ಬೇಡಿಕೆ ಸಲ್ಲಿಸಿ ತಕ್ಷಣ ಪಡೆಯಬಹುದು ಎಂದ ಅವರು, ಎಲ್ಲ ತಾಲೂಕು ಆಸ್ಪತ್ರೆಗಳಲ್ಲೂ ಚಿಕಿತ್ಸೆಯನ್ನು ಚುರುಕು ಮಾಡಬೇಕು ಹಾಗೂ ವ್ಯಾಕ್ಸಿನೇಷನ್ ಅಭಿಯಾನಕ್ಕೆ ವೇಗ ಕೊಡಬೇಕು ಎಂದು ಸೂಚಿಸಿದ್ದೇನೆ ಎಂದರು.








