ಹೆಸರೂರಲ್ಲಿರುವ ಶುದ್ಧ ನೀರಿನ ಘಟಕಗಳು ಹೆಸರಿಗೆ ಮಾತ್ರ
ಕೊಪ್ಪಳ : ಜನರಿಗೆ ಅನುಕೂಲವಾಗಲಿ ಅನ್ನೋ ಉದ್ದೇಶದಿಂದ ರಾಜ್ಯದ ಹಲವು ಗ್ರಾಮಗಳಲ್ಲಿ ಸರ್ಕಾರದ ವತಿಯಿಂದ ಶುದ್ಧ ನೀರಿನ ಘಟಕಗಳನ್ನು ಸ್ಥಾಪನೆ ಮಾಡಲಾಗಿದೆ. ಇದರಿಂದ ಸಾಕಷ್ಟು ಮಂದಿ ಅನುಕೂಲವಾಗಿದೆ.
ಇದೊಂದು ಜನಪರ ಕಾರ್ಯಕ್ರಮವಾಗಿದ್ದು, ಪ್ರತಿ ಗ್ರಾಮದಲ್ಲೂ ಶುದ್ಧ ನೀರಿನ ಘಟಕ ಸ್ಥಾಪನೆಯ ಅವಶ್ಯಕತೆ ಇದೆ. ಆದ್ರೆ ಕೆಲವರ ನಿರ್ಲಕ್ಷ್ಯದಿಂದಾಗಿ ಸಾಕಷ್ಟು ಕಡೆ ಶುದ್ಧ ನೀರಿನ ಘಟಕಗಳು ಅನಾಥವಾಗಿವೆ.
ಅದಕ್ಕೆ ಉದಾಹರಣೆ ಎಂಬಂತೆ ಕುಷ್ಟಗಿ ತಾಲೂಕಿನ ದೋಟಿಹಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೆಸರೂರು ಗ್ರಾಮದಲ್ಲಿ ಅಳವಡಿಸಿರುವ ಎರಡು ಶುದ್ದ ನೀರಿನ ಘಟಕಗಳು ಹೆಸರಿಗೆ ಮಾತ್ರ ಇದ್ದು ಅಪ್ರಯೋಜಕವಾಗಿದೆ.
ಹೌದು..! ಹೆಸರೂರು ಗ್ರಾಮದ ಜನರಿಗಾಗಿ ಶಾಲೆಯ ಬಳಿ ಹಾಗೂ ಜನತಾ ಕಾಲೋನಿಯಲ್ಲಿ ಪ್ರತ್ಯೇಕ ಶುದ್ದ ನೀರಿನ ಘಟಕ ಅಳವಡಿಸಲಾಗಿದೆ.
ಜನತಾ ಕಾಲೋನಿಯ ಬಳಿ ಇರುವ ಶುದ್ದ ನೀರಿನ ಘಟಕ ಬಂದ್ ಆಗಿ ವರ್ಷವಾಗಿದ್ದು, ಮರು ದುರಸ್ತಿ ಕೂಡ ಆಗಿಲ್ಲ. ಇನ್ನೊಂದು ಶಾಲೆಯ ಬಳಿ ಇರುವ ಘಟಕಕ್ಕೆ ಬರೀ ಕ್ಯಾಬಿನ್ ಅಳವಡಿಸಿದ್ದು ಯಂತ್ರಗಳ ಜೋಡಣೆ ಸಾಧ್ಯವಾಗಿಲ್ಲ.
ಈ ಬಗ್ಗೆ ಅನೇಕ ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ರೂ ಯಾವುದೇ ಪ್ರಯೋಜನಾ ಆಗುತ್ತಿಲ್ಲ ಅನ್ನೋ ಗ್ರಾಮಸ್ಥರ ಆರೋಪವಾಗಿದೆ.
ಇನ್ನೇನು ಬೇಸಿಗೆ ಸಮೀಪಿಸುತ್ತಿದೆ. ಈಗಲಾದ್ರೂ ಈ ಶುದ್ಧ ನೀರಿನ ಘಟಕಗಳನ್ನು ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.