ಕೊಪ್ಪಳ: ಸಾಮಾನ್ಯವಾಗಿ ಸರ್ಕಾರಿ ಶಾಲೆಯ ಮಕ್ಕಳು ಅಕ್ಕಪಕ್ಕದ ಊರುಗಳಿಗೆ ಪ್ರವಾಸ ಹೋಗುವುದೇ ಒಂದು ಸಂಭ್ರಮದ ಸಂಗತಿ. ಆದರೆ, ಕೊಪ್ಪಳ ತಾಲೂಕಿನ ಬಹದ್ದೂರಬಂಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಮಾತ್ರ ಊಹಿಸಲೂ ಸಾಧ್ಯವಾಗದ ಅದೃಷ್ಟವೊಂದನ್ನು ಪಡೆದಿದ್ದಾರೆ. ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳು ಆಕಾಶದಲ್ಲಿ ಹಾರುವ ವಿಮಾನವನ್ನು ನೋಡಿ ಕೈಬೀಸುವುದು ಸಾಮಾನ್ಯ. ಆದರೆ, ಅದೇ ವಿಮಾನದಲ್ಲಿ ತಾವು ಕುಳಿತು ರಾಜಧಾನಿಗೆ ಪ್ರಯಾಣಿಸುತ್ತೇವೆ ಎಂದು ಆ ಮಕ್ಕಳು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಇಂತಹದೊಂದು ಅಸಾಧ್ಯವಾದ ಕನಸನ್ನು ನನಸು ಮಾಡಿ ತೋರಿಸಿದ್ದಾರೆ ಆ ಶಾಲೆಯ ಹೆಮ್ಮೆಯ ಮುಖ್ಯೋಪಾದ್ಯಾಯರಾದ ಬೀರಪ್ಪ ಅಂಡಗಿ.
ವಿದ್ಯಾರ್ಥಿಗಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚಿಸಲು ವಿನೂತನ ಪ್ರಯೋಗ
ಬೀರಪ್ಪ ಅಂಡಗಿ ಅವರು ಸುಮ್ಮನೆ ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ಯಲಿಲ್ಲ. ಬದಲಾಗಿ ಮಕ್ಕಳಲ್ಲಿ ಶೈಕ್ಷಣಿಕ ಆಸಕ್ತಿ ಮತ್ತು ಸ್ಪರ್ಧಾ ಮನೋಭಾವವನ್ನು ಬೆಳೆಸಲು ಒಂದು ವಿಶಿಷ್ಟ ಮಾರ್ಗವನ್ನು ಕಂಡುಕೊಂಡರು. ಕಳೆದ ಏಪ್ರಿಲ್ ತಿಂಗಳಲ್ಲಿ 5 ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಒಂದು ವಿಶೇಷ ಸ್ಪರ್ಧಾತ್ಮಕ ಪರೀಕ್ಷೆಯನ್ನು ಆಯೋಜಿಸಿದ್ದರು. ಒಟ್ಟು 220 ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಈ ಪರೀಕ್ಷೆಯನ್ನು ಎದುರಿಸಿದ್ದರು. ಆ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆಯಾದ 24 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಈ ಐತಿಹಾಸಿಕ ವಿಮಾನ ಯಾನಕ್ಕೆ ಆಯ್ಕೆ ಮಾಡಲಾಗಿತ್ತು. ಇದು ಮಕ್ಕಳಲ್ಲಿ ಓದಿನ ಕಡೆಗೆ ಹೆಚ್ಚಿನ ಗಮನ ಹರಿಸಲು ಪ್ರೇರಣೆ ನೀಡಿತು.
ಬಿಸಿಯೂಟ ನೌಕರರಿಗೂ ಸಿಕ್ತು ವಿಮಾನ ಯಾನದ ಭಾಗ್ಯ
ಈ ಪ್ರವಾಸದ ಮತ್ತೊಂದು ವಿಶೇಷವೆಂದರೆ ಬೀರಪ್ಪ ಮೇಷ್ಟ್ರು ತೋರಿದ ಮಾನವೀಯತೆ ಮತ್ತು ಸಮಾನತೆ. ಅವರು ಕೇವಲ ಮಕ್ಕಳನ್ನು ಮಾತ್ರವಲ್ಲದೆ, ಶಾಲೆಯ ಶೈಕ್ಷಣಿಕ ಪ್ರಗತಿಗೆ ಕಾರಣರಾದ ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ಸಹ ಶಿಕ್ಷಕರು ಮತ್ತು ನಿತ್ಯ ಮಕ್ಕಳಿಗೆ ಅನ್ನ ನೀಡುವ ಬಿಸಿಯೂಟ ತಯಾರಕ ಸಿಬ್ಬಂದಿಯನ್ನು ಕೂಡ ವಿಮಾನದಲ್ಲಿ ಕರೆದೊಯ್ದಿದ್ದಾರೆ. ಒಟ್ಟು 40 ಜನರ ತಂಡ ಜಿಂದಾಲ್ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿತು. ಸಮಾಜದ ಎಲ್ಲ ಸ್ತರದವರನ್ನು ಸಮಾನವಾಗಿ ಕಂಡು, ಎಲ್ಲರಿಗೂ ಗೌರವ ನೀಡಿದ ಬೀರಪ್ಪ ಅವರ ಈ ನಡೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಸ್ವಂತ ಖರ್ಚಿನಲ್ಲಿ 5 ಲಕ್ಷ ರೂ. ವ್ಯಯಿಸಿದ ದಾನಿ ಶಿಕ್ಷಕ
ಸರ್ಕಾರಿ ನೌಕರರು ತಮ್ಮ ಸಂಬಳದಲ್ಲಿ ಕುಟುಂಬ ನಿರ್ವಹಣೆ ಮಾಡುವುದೇ ಕಷ್ಟ ಎನ್ನುವ ಈ ಕಾಲದಲ್ಲಿ, ಬೀರಪ್ಪ ಅಂಡಗಿ ಅವರು ಬರೋಬ್ಬರಿ 5 ಲಕ್ಷ ರೂಪಾಯಿಗಳನ್ನು ಮಕ್ಕಳ ಶೈಕ್ಷಣಿಕ ಪ್ರವಾಸಕ್ಕಾಗಿ ಖರ್ಚು ಮಾಡಿದ್ದಾರೆ. 3.5 ಲಕ್ಷ ರೂಪಾಯಿ ವೆಚ್ಚದಲ್ಲಿ ಚಾರ್ಟರ್ಡ್ ಮಾದರಿಯಲ್ಲಿ ವಿಮಾನದ ಟಿಕೆಟ್ ಬುಕ್ ಮಾಡಲಾಗಿದ್ದು, ಊಟ, ವಸತಿ ಮತ್ತು ಇತರೆ ವೆಚ್ಚಗಳು ಸೇರಿದಂತೆ ಒಟ್ಟು ಖರ್ಚು 5 ಲಕ್ಷ ರೂ. ತಲುಪಲಿದೆ ಎಂದು ಅಂದಾಜಿಸಲಾಗಿದೆ. ತಮ್ಮ ಸ್ವಂತ ಹಣವನ್ನು ಮಕ್ಕಳ ಸಂತೋಷಕ್ಕಾಗಿ ಧಾರೆಯೆರೆದ ಇವರ ತ್ಯಾಗ ನಿಜಕ್ಕೂ ಅವಿಸ್ಮರಣೀಯ.
ಮುಗಿಲು ಮುಟ್ಟಿದ ಮಕ್ಕಳ ಸಂಭ್ರಮ
ಜಿಂದಾಲ್ ವಿಮಾನ ನಿಲ್ದಾಣದಲ್ಲಿ ವಿಮಾನ ಏರುವಾಗ ಮಕ್ಕಳ ಮುಖದಲ್ಲಿನ ನಗು ಮತ್ತು ಅಚ್ಚರಿ ನೋಡುವಂತಿತ್ತು. ಕೊಪ್ಪಳದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಂಸದ ರಾಜಶೇಖರ ಹಿಟ್ನಾಳ ಅವರು ಮಕ್ಕಳಿಗೆ ಬೀಳ್ಕೊಡುಗೆ ನೀಡಿ ಶುಭ ಹಾರೈಸಿದರು. ಬೆಂಗಳೂರಿಗೆ ತಲುಪಿದ ಮಕ್ಕಳು, ವಿಧಾನ ಸೌಧ, ಹೈಕೋರ್ಟ್ ಸೇರಿದಂತೆ ರಾಜಧಾನಿಯ ಪ್ರಮುಖ ಸ್ಥಳಗಳನ್ನು ವೀಕ್ಷಿಸಲಿದ್ದಾರೆ.
ಬೀರಪ್ಪ ಅಂಡಗಿ ಅವರ ಈ ಮಾದರಿ ಕಾರ್ಯ ರಾಜ್ಯದ ಇತರೆ ಶಿಕ್ಷಕರಿಗೆ ಮತ್ತು ದಾನಿಗಳಿಗೆ ಪ್ರೇರಣೆಯಾಗಿದೆ. ಸರ್ಕಾರಿ ಶಾಲೆಯ ಮಕ್ಕಳೂ ಯಾರಿಗೂ ಕಡಿಮೆಯಿಲ್ಲ ಎಂಬುದನ್ನು ಈ ಘಟನೆ ಸಾಬೀತುಪಡಿಸಿದೆ. ಶಿಕ್ಷಕ ಅಂದರೆ ಕೇವಲ ಪಾಠ ಮಾಡುವವರಲ್ಲ, ಮಕ್ಕಳ ಬದುಕಿಗೆ ಹೊಸ ದಾರಿ ತೋರಿಸುವ ಮಾರ್ಗದರ್ಶಕ ಎಂಬುದನ್ನು ಬೀರಪ್ಪ ಅವರು ನಡೆದು ತೋರಿಸಿದ್ದಾರೆ.








