ರಾಜಕಾರಣದಲ್ಲಿ ಗುಡುಗು ಸಿಡಿಲು ಮಿಂಚು ಬರುವುದು ಸಹಜ : ಶ್ರೀನಿವಾಸ ಪೂಜಾರಿ
ಉಡುಪಿ : ರಾಜಕಾರಣದಲ್ಲಿ ಗುಡುಗು ಸಿಡಿಲು ಮಿಂಚು ಬರುವುದು ಸಹಜ. ನಂತರ ತಣ್ಣನೆಯ ಮಳೆ ಬಂದು ವಾತಾವರಣ ತಿಳಿಯಾಗುತ್ತದೆ ಎಂದು ಸಿಎಂ ರಾಜೀನಾಮೆ ಹೇಳಿಕೆ ಬಗ್ಗೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಪ್ರತಿಕ್ರಿಯೆ ನೀಡಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರಾಧ್ಯಕ್ಷರು, ರಾಜ್ಯಾಧ್ಯಕ್ಷರು, ಮುಖ್ಯಮಂತ್ರಿ ಮತ್ತು ಸರಕಾರಕ್ಕೆ ಯಾವ ಗೊಂದಲವೂ ಇಲ್ಲ.
ನಿನ್ನೆ ದೇವರಾಜ ಅರಸು ಪುಣ್ಯ ತಿಥಿ ಕಾರ್ಯಕ್ರಮದಲ್ಲಿ ಸಿಎಂ ಸ್ಪಷ್ಟವಾಗಿ ಮಾತನಾಡಿದ್ದಾರೆ. ನಮ್ಮಲ್ಲಿ ಯಾವುದೇ ಗೊಂದಲವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಹೈಕಮಾಂಡ್ ಕೊಟ್ಟ ಸಾಮಥ್ರ್ಯದಿಂದ ನಾನು ಮುಖ್ಯಮಂತ್ರಿಯಾಗಿ ಒಳ್ಳೆಯ ಕೆಲಸ ಮಾಡುತ್ತಿದ್ದೇನೆ ಎಂದಿದ್ದಾರೆ. ನಾವೆಲ್ಲರೂ ಒಟ್ಟಾಗಿ ಒಂದಾಗಿ ಯಡಿಯೂರಪ್ಪನವರ ಜೊತೆ ನಿಂತಿದ್ದೇವೆ.
ಎಲ್ಲ ಶಾಸಕರು, ಸಂಸದರು ಮತ್ತು ಮುಖ್ಯಮಂತ್ರಿಗಳ ಗುರಿ ಒಂದೇ, ಅದು ಕರ್ನಾಟಕವನ್ನು ಕೊರೊನಾ ಮುಕ್ತ ಮಾಡುವುದು ಎಂದು ಹೇಳಿದರು.
ಇನ್ನು ಯತ್ನಾಳ್-ಯೋಗೇಶ್ವರ ಅಪರಸ್ವರದ ಬಗ್ಗೆ ಮಾತನಾಡಿ, ರಾಜಕಾರಣದಲ್ಲಿ ಗುಡುಗು ಸಿಡಿಲು ಮಿಂಚು ಬರುವುದು ಸಹಜ. ನಂತರ ತಣ್ಣನೆಯ ಮಳೆ ಬಂದು ವಾತಾವರಣ ತಿಳಿಯಾಗುತ್ತದೆ.
ಸಣ್ಣಪುಟ್ಟ ಅಪಸ್ವರಗಳು ಬಂದರೆ ರಾಜ್ಯಾಧ್ಯಕ್ಷರು ಕರೆದು ತಿಳಿ ಹೇಳುತ್ತಾರೆ. ಯಡಿಯೂರಪ್ಪನವರೇ ಮುಂದುವರಿಯುತ್ತಾರೆ ಎಂದು ನಳಿನ್ ಕುಮಾರ್ ಗಟ್ಟಿ ಧ್ವನಿಯಲ್ಲಿ ಹೇಳಿದ್ದಾರೆ ಎಂದು ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.









