ಕೋವಿಡ್ -19 ಸಾಂಕ್ರಾಮಿಕ ಹಿನ್ನೆಲೆ ಅಮರನಾಥ ಯಾತ್ರೆ ರದ್ದು
ಹೊಸದಿಲ್ಲಿ, ಜುಲೈ 22: ಕೋವಿಡ್ -19 ಸಾಂಕ್ರಾಮಿಕ ರೋಗದ ಮಧ್ಯೆ ಈ ವರ್ಷದ ಅಮರನಾಥ ಯಾತ್ರೆ ರದ್ದುಗೊಂಡಿದೆ. ತೀರ್ಥಯಾತ್ರೆಗೆ ಸಂಬಂಧಿಸಿದಂತೆ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಶ್ರೀ ಅಮರನಾಥ ದೇಗುಲ ಮಂಡಳಿ (ಎಸ್ಎಎಸ್ಬಿ) ಮಂಗಳವಾರ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಂಡಿದೆ.
ಪ್ರಸ್ತುತ ಸನ್ನಿವೇಶಗಳ ಆಧಾರದ ಮೇಲೆ, ಈ ವರ್ಷದ ಶ್ರೀ ಅಮರನಾಥ ಯಾತ್ರೆಯನ್ನು ನಡೆಸುವುದು ಸೂಕ್ತವಲ್ಲ ಎಂದು ಶ್ರೀ ಅಮರನಾಥಜಿ ದೇವಾಲಯ ಮಂಡಳಿ ನಿರ್ಧರಿಸಿದೆ ಮತ್ತು ಅಮರನಾಥ ಯಾತ್ರೆ 2020 ರದ್ದತಿಯನ್ನು ಘೋಷಿಸಲು ವಿಷಾದ ವ್ಯಕ್ತಪಡಿಸಿದೆ ಎಂದು ಜಮ್ಮು ಮತ್ತು ಕಾಶ್ಮೀರ ಸರ್ಕಾರದ ರಾಜ್ ಭವನ ತಿಳಿಸಿದೆ.

ಈ ನಿರ್ಧಾರವು ಅಂತಿಮವಾಗಿ ವಾರ್ಷಿಕ ತೀರ್ಥಯಾತ್ರೆಯ ಬಗ್ಗೆ ಎದ್ದಿದ್ದ ಊಹಾಪೋಹಗಳಿಗೆ ಅಂತ್ಯ ಹಾಡಿದೆ. ಕೋವಿಡ್-19 ರ ದೃಷ್ಟಿಯಿಂದ ಈ ವರ್ಷದ ಅಮರನಾಥ ಯಾತ್ರೆಯನ್ನು ಅಮಾನತುಗೊಳಿಸುವಂತೆ ಕೇಂದ್ರ, ಜಮ್ಮು ಮತ್ತು ಕಾಶ್ಮೀರ ಆಡಳಿತ ಮತ್ತು ಎಸ್ಎಎಸ್ಬಿಗೆ ನಿರ್ದೇಶನ ಕೋರಿ ಸಲ್ಲಿಸಿದ್ದ ಮನವಿಯನ್ನು ದಿನಗಳ ಹಿಂದೆ ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು.
ದರ್ಶನ್ ನೇರ ಪ್ರಸಾರವಾಗಲಿದೆ:
ಲಕ್ಷಾಂತರ ಭಕ್ತರ ಭಾವನೆಗಳನ್ನು ಗೌರವಿಸಿ ಬೆಳಿಗ್ಗೆ ಮತ್ತು ಸಂಜೆ ಆರತಿಗಳ ನೇರ ಪ್ರಸಾರ ಮಾಡಲಾಗುವುದು ಎಂದು ಎಸ್ಎಎಸ್ಬಿ ಹೇಳಿದೆ. ಮಂಡಳಿಯು ಲಕ್ಷಾಂತರ ಭಕ್ತರ ಭಾವನೆಗಳನ್ನು ಅರ್ಥ ಮಾಡಿಕೊಂಡಿದೆ ಮತ್ತು ಗೌರವಿಸುತ್ತದೆ. ಮಂಡಳಿಯು ಬೆಳಿಗ್ಗೆ ಮತ್ತು ಸಂಜೆ ಆರತಿಯ ಲೈವ್ ಟೆಲಿಕಾಸ್ಟ್ / ವರ್ಚುವಲ್ ದರ್ಶನವನ್ನು ಮುಂದುವರಿಸಲಿದೆ. ಇದಲ್ಲದೆ, ಹಿಂದಿನಿಂದ ನಡೆದು ಬಂದ ಪ್ರಕಾರವೇ ಸಾಂಪ್ರದಾಯಿಕ ಆಚರಣೆಗಳನ್ನು ನಡೆಸಲಿದೆ ಎಂದು ಎಸ್ಎಎಸ್ಬಿ ಹೇಳಿಕೆಯಲ್ಲಿ ತಿಳಿಸಿದೆ.








