ಕೋವಿಡ್ ಸೋಂಕಿನಿಂದ ರಕ್ಷಿಸಿಕೊಳ್ಳಲು ಕೋವಿಡ್ ಕೊಡೆ !
ಹೊಸದಿಲ್ಲಿ, ಜುಲೈ 8: ಕೊರೊನಾ ಸೋಂಕು ತನ್ನ ಮರಣ ಮೃದಂಗ ವನ್ನು ಮುಂದುವರಿಸಿದ್ದು, ಜನರು ತಮ್ಮನ್ನು ತಾವು ಕಾಪಾಡಿಕೊಳ್ಳಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸರ್ ಹಾಗೂ ಮಾಸ್ಕ್ ಬಳಕೆ ಮುಂತಾದ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುತ್ತಿದ್ದಾರೆ. ಅದರೂ ಕೊರೋನಾ ಸೋಂಕು ತನ್ನ ಹಾವಳಿಯನ್ನು ಮುಂದುವರಿಸಿದೆ. ಕೊರೋನಾಗೆ ಇನ್ನೂ ಲಸಿಕೆ ಕಂಡು ಹಿಡಿಯುವ ಪ್ರಯತ್ನಗಳು ನಡೆಯುತ್ತಿದೆಯಾದರೂ ಸದ್ಯಕ್ಕೆ ಅದು ದೊರಕುವ ಸಾಧ್ಯತೆ ಇಲ್ಲ.
ಅನೇಕರು ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಕೊರೊನಾದಿಂದ ದೂರವಿರುವ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಅಂತಹ ಒಂದು ಹೊಸ ತಂತ್ರಜ್ಞಾನದ ಪಟ್ಟಿಗೆ ಕೋವಿಡ್ ಕೊಡೆ ಸೇರ್ಪಡೆಯಾಗಿದೆ.

ಕೋವಿಡ್ ಸೋಂಕಿನ ನೆರಳಿನಿಂದ ರಕ್ಷಿಸಿಕೊಳ್ಳಲು ಕಂಡು ಹಿಡಿದಿರುವ ಹೊಸ ತಂತ್ರಜ್ಞಾನ ಈ ಕೋವಿಡ್ ಕೊಡೆ.
ಉದ್ಯಮಿ ಹರ್ಷ್ ಗೋಯೆಂಕಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಕೋವಿಡ್ ಕೊಡೆಯ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ಕೊಡೆ ಹಿಡಿದುಕೊಂಡು ನಡೆದುಕೊಂಡು ಬರುವಾಗ ಆತನ ಮುಂದೆ ವ್ಯಕ್ತಿಯೊಬ್ಬರು ಜೋರಾಗಿ ಸೀನುತ್ತಾರೆ. ಕೂಡಲೇ ಕೊಡೆ ಹಿಡಿದು ಕೊಂಡ ವ್ಯಕ್ತಿಯ ಕೊಡೆಯಿಂದ ಪೂರ್ತಿಯಾಗಿ ರಕ್ಷಣೆ ಪಡೆದುಕೊಳ್ಳಲು ಪ್ಲಾಸ್ಟಿಕ್ ಪರದೆ ಹೊರ ಬರುತ್ತದೆ. ಇದು ಕೋವಿಡ್ ಕೊಡೆಯ ವಿಶೇಷತೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದ್ದು ಇದುವರೆಗೆ 30 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.








