ಬೆಂಗಳೂರು, ಮೇ 22 : ಪಶ್ಚಿಮ ಬಂಗಾಳ ಆಂಫಾನ್ ಚಂಡಮಾರುತದ ಸುಳಿಯಲ್ಲಿ ತತ್ತರಿಸಿ ಹೋಗಿದೆ. ಭೀಕರವಾದ ಪ್ರಾಕೃತಿಕ ವಿಕೋಪ ಪಶ್ಚಿಮ ಬಂಗಾಳವನ್ನು ಜರ್ಜರಿತಗೊಳಿಸಿದ್ದು, 72 ಮಂದಿಯ ಜೀವವನ್ನು ಬಲಿ ತೆಗೆದುಕೊಂಡಿದೆ.
ಪ್ರಧಾನಿ ನರೇಂದ್ರ ಮೋದಿ ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳ ವೈಮಾನಿಕ ಸಮೀಕ್ಷೆ ಕೈಗೊಂಡಿದ್ದು, ಚಂಡಮಾರುತದಿಂದ ತತ್ತರಿಸಿರುವ ರಾಜ್ಯಗಳನ್ನು ಸಹಜ ಸ್ಥಿತಿಗೆ ತರಲು ಕೇಂದ್ರದಿಂದ ನೆರವು ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿರುವುದು ಕರ್ನಾಟಕ ಕಾಂಗ್ರೆಸ್ ಇದು ಪ್ರಧಾನಿ ಅವರ ದ್ವಂದ್ವ ನೀತಿಯನ್ನು ತೋರಿಸುತ್ತದೆ ಎಂದು ಟೀಕಿಸಿದೆ.
ಕರ್ನಾಟಕದಲ್ಲಿ ಪ್ರವಾಹ ಬಂದು ಜನ ಮೃತಪಟ್ಟಾಗ ಬರದ ಪ್ರಧಾನಿ ಮೋದಿ, ಈಗ ಬಂಗಾಳಕ್ಕೆ ಭೇಟಿ ನೀಡಿದ್ದಾರೆ ಎಂದು ಕೆಪಿಸಿಸಿ ಟ್ವೀಟ್ ಮಾಡಿದೆ.
ನಾವು ಆಂಫಾನ್ ಚಂಡಮಾರುತಕ್ಕೆ ಒಳಗಾಗಿ ಸಂಕಷ್ಟದಲ್ಲಿರುವ ಪಶ್ಚಿಮ ಬಂಗಾಳದ ಜೊತೆ ನಿಲ್ಲುತ್ತೇವೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ದ್ವಂದ್ವ ನೀತಿಯನ್ನು ಖಂಡಿಸುತ್ತೇವೆ ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದೆ.
ಪಶ್ಚಿಮ ಬಂಗಾಳದ ವೈಮಾನಿಕ ಸಮೀಕ್ಷೆಗೆ ತೆರಳಿದ ಪ್ರಧಾನಿ ಕರ್ನಾಟಕದಲ್ಲಿ ಪ್ರವಾಹ, ಭೂ ಕುಸಿತ ಉಂಟಾದಾಗ ರಾಜ್ಯಕ್ಕೆ ಭೇಟಿ ನೀಡಲಿಲ್ಲ. ಮುಂದಿನ ವರ್ಷ ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಡೆಯಲು ಇರುವುದರಿಂದ ಪ್ರಧಾನಿ ಅಲ್ಲಿಗೆ ಭೇಟಿ ನೀಡಿರಬಹುದು. ಇಲ್ಲಿಯೂ ಜನ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದೆ.
283 ವರ್ಷಗಳಲ್ಲಿಯೇ ಕಂಡು ಕೇಳರಿಯದ ಭೀಕರ ಚಂಡಮಾರುತ ಪಶ್ಚಿಮ ಬಂಗಾಳದಲ್ಲಿ ಅಪಾರ ನಷ್ಟಗಳ ಸರಮಾಲೆಯನ್ನು ಸೃಷ್ಟಿಸಿದೆ. ಮುಖ್ಯ ಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ 283 ವರ್ಷಗಳಲ್ಲಿಯೇ ಪಶ್ಚಿಮ ಬಂಗಾಳ ಕಂಡ ಭೀಕರ ಚಂಡಮಾರುತ ಎಂದು ಹೇಳಿದ್ದರು ಮತ್ತು ಆಂಫಾನ್ ಚಂಡಮಾರುತದಿಂದ ಉಂಟಾಗಿರುವ ನಷ್ಟದ ಪ್ರಮಾಣವನ್ನು ಅವಲೋಕಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಬರಬೇಕೆಂದು ಕೇಳಿಕೊಂಡಿದ್ದರು. ಚಂಡ ಮಾರುತದಿಂದ ಒಂದು ಲಕ್ಷ ಕೋಟಿ ರೂ.ಗೂ ಹೆಚ್ಚಿನ ಮೌಲ್ಯದ ನಷ್ಟವುಂಟಾಗಿದೆ ಎಂದೂ ಮಮತಾ ಹೇಳಿದ್ದರು.
ಚಂಡಮಾರುತದಿಂದ ನೊಂದವರಿಗೆ ಕೇಂದ್ರದಿಂದ ನೆರವು ನೀಡಲಾಗುವುದು. ಪಶ್ಚಿಮ ಬಂಗಾಳದಲ್ಲಿ ಉಂಟಾಗಿರುವ ಹಾನಿಯ ದೃಶ್ಯಗಳನ್ನು ನೋಡಿರುವುದಾಗಿಯೂ, ಇದು ಸವಾಲಿನ ಪರಿಸ್ಥಿತಿಯಾಗಿದ್ದು ಪಶ್ಚಿಮ ಬಂಗಾಳದ ಜೊತೆ ದೇಶ ನಿಲ್ಲಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಸರಣಿ ಟ್ವೀಟ್ ಗಳ ಮೂಲಕ ಹೇಳಿದ್ದರು.








