ಮುಖ್ಯಮಂತ್ರಿ ಬದಲಾವಣೆ ವಿಚಾರ : ಅಚ್ಚರಿ ಹೇಳಿಕೆ ಕೊಟ್ಟ ಡಿಕೆಶಿ
ಬಾಗಲಕೋಟೆ : ಸಿಎಂ ದೆಹಲಿ ಪ್ರವಾಸ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆಗುತ್ತಿದ್ದಂತೆ ಮತ್ತೆ ಸಿಎಂ ಬದಲಾವಣೆ ಚರ್ಚೆ ಶುರುವಾಗಿದೆ. ಈ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಒಂದು ವಾರ ಕಾಯಿರಿ ಎಂದು ಅಚ್ಚರಿ ಹೇಳಿಕೆ ಕೊಟ್ಟಿದ್ದಾರೆ.
ಬಾಗಲಕೋಟೆಯ ಬನಹಟ್ಟಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರನ್ನು ಇಳಿಸೋದು, ಏರಿಸೋದು ಕೂರಿಸೋದು ಅವರ ಪಾರ್ಟಿಗೆ ಬಿಟ್ಟಿದ್ದು. ಯಡಿಯೂರಪ್ಪ ವಿರುದ್ಧ ಶಾಸಕರು ಭ್ರಷ್ಟಾಚಾರದ ಬಗ್ಗೆ ಹೇಳುತ್ತಿದ್ದಾರೆ. ಆದರೆ ಶಾಸಕರು ಹೇಳುತ್ತಿರೋದು ಸರಿಯಲ್ಲ ಅಂತ ಹೈಕಮಾಂಡ್ ಹೇಳುತ್ತಿಲ್ಲ. ಹಾಗಿದ್ದರೆ ಅದು ನಿಜ ಇರಬೇಕಲ್ಲ. ಇಲ್ಲದಿದ್ರೆ ಶಾಸಕರು ಹೇಳೋದು ಸರಿ ಇಲ್ಲ ಅಂತ ಹೈಕಮಾಂಡ್ ಹೇಳಬಹುದಿತ್ತು, ಹೇಳುತ್ತಿಲ್ಲ. ಇದರ ಅರ್ಥ ಏನು ಅಂತ ಮಾಡಿಕೊಳ್ಳೋದು ಎಂದು ಹೇಳಿದರು.
ಇನ್ನು ಒಂದು ವಾರ ಕಾಯಿರಿ, ಅವರ ಪಕ್ಷದ ಮೀಟಿಂಗ್ ಕರೆದಿದ್ದಾರಲ್ಲ. ಅಸೆಂಬ್ಲಿನೇ ಕರೆದಿಲ್ಲ, ಇದು ಉತ್ತರ ಕರ್ನಾಟಕದ ನಿರ್ಲಕ್ಷ್ಯ ಕಾಣುತ್ತಿದೆ ಎಂದು ಆರೋಪಿಸಿದ ಡಿ.ಕೆ.ಶಿವಕುಮಾರ್, ಎರಡು ವರ್ಷಗಳಿಂದ ಬೆಳಗಾವಿಯಲ್ಲಿ ಅಧಿವೇಶನ ಕರೆದಿಲ್ಲ. ಸುವರ್ಣ ಸೌಧದಲ್ಲಿ ಸೀಟು, ಚೇರ್ ಗಳನ್ನು ಹೆಗ್ಗಣಗಳು ತಿನ್ನುತ್ತಿವೆ. ಸುವರ್ಣಸೌಧದಲ್ಲಿ ಅಸೆಂಬ್ಲಿ ಕರೆಯುವುದು ಬಿಟ್ಟು ಮೀಟಿಂಗ್ ಮಾಡಿಕೊಂಡು ಕೂತಿದ್ದಾರೆ ಎಂದು ಗುಡುಗಿದರು.









