ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನ ಹೊಡೆಯೋಕೆ ‘ಟ್ರಬಲ್ ಶೂಟರ್ ರೆಡಿ’..!
ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆಯೋಕೆ ಸಿದ್ಧತೆ ನಡೆಸಿದ್ದಾರೆ. ಈ ಮೂಲಕ ತಮ್ಮ ಪ್ರತಿಪಕ್ಷಗಳಿಗೆ ಕಾಂಗ್ರೆಸ್ ಕಟ್ಟಪ್ಪ ಚೆಕ್ ಮೇಟ್ ಇಡಲಿದ್ದಾರೆ.
ಹೌದು..! ಕನಕಪುರ ಬಂಡೆ ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಘೋಷಣೆ ಆಗುತ್ತಿದ್ದಂತೆ ರಾಜ್ಯ ಪ್ರವಾಸ ಮಾಡಿ ಪಕ್ಷವನ್ನು ಕಟ್ಟುವುದಾಗಿ ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಆದ್ರೆ ಕೊರೊನಾ ವೈರಸ್ ಡಿಕೆಶಿ ಅವರ ಈ ಪ್ಲಾನ್ ಗೆ ತಣ್ಣೀರೆರಚಿತು. ಇದೀಗ ಕಾಂಗ್ರೆಸ್ ಕಟ್ಟಪ್ಪ ಡಿ.ಕೆ ಶಿವಕುಮಾರ್, ಕೊರೊನಾ ನಡುವೆ ರಾಜ್ಯ ಪ್ರವಾಸ ಮಾಡಲು ತಯಾರಿ ಆರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ ಡಿ.ಕೆ ಶಿವಕುಮಾರ್ ಅವರು ಈ ಒಂದು ವಾರದ ಲಾಕ್ ಡೌನ್ ಬಳಿಕ, ಕೊರೊನಾ ನಡುವೆಯೇ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡಲು ತಂತ್ರ ರೂಪಿಸಿದ್ದಾರಂತೆ. ಈ ಪರಿಸ್ಥಿತಿಯಲ್ಲಿ ಪಕ್ಷದ ಜಿಲ್ಲಾ ಕೇಂದ್ರ ಕಚೇರಿಗಳಿಗೆ ಹೋದರೆ ಕಾರ್ಯಕರ್ತರ ಜಾತ್ರೆಯೇ ಸೇರಲಿದೆ ಎಂದು ಶಿವಕುಮಾರ್ ಅರಿತಿದ್ದಾರೆ. ಹೀಗಾಗಿ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್, ಒಂದೇ ಕಲ್ಲಿಗೆ ಹಲವು ಹಕ್ಕಿಗಳನ್ನ ಹೊಡೆಯುವ ಪ್ಲಾನ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ರಾಜ್ಯದಾದ್ಯಂತ ಮಠ-ಮಾನ್ಯಗಳಿಗೆ ಡಿಕೆಶಿ ಪ್ರವಾಸ
ಎಸ್..! ಡಿ.ಕೆ.ಶಿವಕುಮಾರ್ ಸದ್ಯದ ಪರಿಸ್ಥಿತಿಯಲ್ಲಿ ಪ್ರತಿ ಜಿಲ್ಲೆಗೆ ತೆರಳಿ ಬಹಿರಂಗ ಸಭೆಗಳನ್ನಾಗಲಿ ಸಮಾರಂಭಗಳನ್ನಾಗಲಿ ನಡೆಸಲು ಸಾಧ್ಯವಿಲ್ಲ. ಹೀಗಾಗಿ ರಾಜ್ಯದ ಮಠ-ಮಾನ್ಯಗಳಿಗೆ ಭೇಟಿ ನೀಡಲು ಟ್ರಬಲ್ ಶೂಟರ್ ರೋಡ್ ಮ್ಯಾಪ್ ಮಾಡಿಕೊಂಡಿದ್ದಾರೆ.
ಮಠಗಳಿಗೆ ಭೇಟಿ ನೀಡುವ ಡಿಕೆಶಿ ಅಲ್ಲಿನ ಶ್ರೀಗಳ ಆಶೀರ್ವಾದ ಪಡೆದು ಸಮುದಾಯಕ್ಕೆ ಸಂದೇಶ ರವಾನಿಸುತ್ತಾರೆ.ಮಠಗಳಿಗೆ ಭೇಟಿ ನೀಡಿದ ವೇಳೆಯೇ ತಮ್ಮ ವಾಸ್ತವ್ಯದ ಸ್ಥಳಕ್ಕೆ ಪಕ್ಷದ ಜಿಲ್ಲಾ ಮುಖಂಡರನ್ನ ಕರೆಸಿಕೊಂಡು ಪಕ್ಷ ಸಂಘಟನೆ ಬಗ್ಗೆ ಮಾತುಕತೆ ನಡೆಸಲಿದ್ದಾರೆ. ಪಕ್ಷದ ಕಚೇರಿಗೂ ತೆರಳದೇ, ಸಭೆ ಸಮಾವೇಶವನ್ನೂ ನಡೆಸದೇ, ಮಠಗಳ ಭೇಟಿಯ ಜೊತೆಗೆ ರಾಜ್ಯ ಪ್ರವಾಸ ಮಾಡೋದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಮಾಸ್ಟರ್ ಪ್ಲಾನ್ ಆಗಿದೆ.








