ಚಪ್ಪಲಿ ಏಟನ್ನಾದರು ತಿನ್ನಬಹುದು ಆದರೆ ದುಡ್ಡಿನ ಏಟನ್ನು ತಿನ್ನಲು ಆಗುವುದಿಲ್ಲ : ಡಿಕೆಶಿ
ಬೆಂಗಳೂರು: ಚಪ್ಪಲಿ ಏಟನ್ನಾದರು ತಿನ್ನಬಹುದು ಆದರೆ ದುಡ್ಡಿನ ಏಟನ್ನು ತಿನ್ನಲು ಆಗುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಹೇಳಿದ್ದಾರೆ.
ಸತತವಾಗಿ ಬೇಲೆ ಏರಿಕೆಯಾಗುತ್ತಿದ್ದು, ಇದನ್ನು ಖಂಡಿಸಿ ರಾಜ್ಯ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನೂರು ಬಾರಿ ಚಪ್ಪಲಿಯಿಂದ ಪಟ ಪಟ ಪಟ ಅಂತ ಹೊಡೆದರೂ ತಿನ್ನಬಹುದು. ಆದರೆ ದುಡ್ಡಿನ ಏಟು ತಿನ್ನಲು ಆಗಲ್ಲ. ಬೆಲೆ ಏರಿಕೆ ಗಗನಕ್ಕೆ ಹೋಗಿದೆ. ಆದಾಯ ಪಾತಾಳಕ್ಕೆ ಹೋಗಿದೆ. ದಿನಾ ಪಿಕ್ ಪಾಕೆಟ್ ಆಗುತ್ತಿದೆ ಎಂದು ಕಿಡಿಕಾರಿದರು.
ಅಲ್ಲದೇ ಇವತ್ತಿಗೆ ಆರ್ಥಿಕ ವರ್ಷದ ಲೆಕ್ಕಾಚಾರ ಮುಗಿದಿದೆ. ಹೀಗಾಗಿ ಇವತ್ತೇ ಈ ಪ್ರತಿಭಟನೆ ಮಾಡಿದ್ದೇವೆ. ಗ್ಯಾಸ್ ಸಿಲಿಂಡರ್, ಬೈಕ್ ಕಾರಿಗೆ ಹಾರ ಹಾಕಿ ಪೂಜೆ ಮಾಡಿ ವಿನೂತನ ಪ್ರತಿಭಟನೆ ಮಾಡಿದ್ದೇವೆ. ಜನರ ನೋವನ್ನು ಬಿಜೆಪಿ ವಿರುದ್ಧ ಮತ ಹಾಕಿ, ಬಿಜೆಪಿ ಸರ್ಕಾರ ಕಿತ್ತೆಸೆಯುವ ಮೂಲಕ ಕಳೆಯಬೇಕು ಎಂದು ವಾಗ್ದಾಳಿ ನಡೆಸಿದರು.
ಕೆಪಿಸಿಸಿ ಕಚೇರಿ ಮುಂಭಾಗದಲ್ಲಿ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್‍ಸಿಂಗ್ ಸುರ್ಜೆವಾಲಾ, ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್, ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ತಳ್ಳುಗಾಡಿ ಮೇಲೆ ಇಟ್ಟ ಬೈಕಿಗೆ ಹಾರ ಹಾಕಿ ಊದುಬತ್ತಿ ಹಚ್ಚಿ ಡಿಕೆಶಿ ಆರತಿ ಎತ್ತಿದರು. ನಂತರ ಪೂಜೆ ಮಾಡಿ ಗಂಟೆ ಬಾರಿಸಿ ತಲೆಮೇಲೆ ಸಿಲೆಂಡರ್ ಹೊತ್ತು ಪ್ರತಿಭಟನೆ ನಡೆಸಿದರು.









