ಸದ್ಯದ ಲಾಕ್ ಡೌನ್ ನಿಷ್ಪ್ರಯೋಜಕ : ಸತೀಶ್ ಜಾರಕಿಹೊಳಿ ಕಿಡಿ
ಬೆಳಗಾವಿ : ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರೋ ಹಿನ್ನೆಲೆ ರಾಜ್ಯ ಸರ್ಕಾರ ರಾಜ್ಯದ ಕೆಲವಡೆ ಲಾಕ್ ಡೌನ್ ಘೋಷಣೆ ಮಾಡಿದೆ. ಈ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದು, ಸದ್ಯ ಜಾರಿಗೊಳಿಸಿರುವ ಲಾಕ್ ಡೌನ್ ನಿಷ್ಪ್ರಯೋಜಕ ಎಂದು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ
ಗೋಕಾಕ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ಯಾವಾಗ ಲಾಕ್ ಡೌನ್ ಮಾಡಬೇಕಿತ್ತೋ ಆಗ ಮಾಡಲಿಲ್ಲ. ನಿಜವಾಗಿಯೂ ಫೆಬ್ರವರಿ, ಮಾರ್ಚ್ನಲ್ಲಿ ಲಾಕ್‌ಡೌನ್ ಮಾಡಬೇಕಿತ್ತು. ಆದರೆ ಆಗ ಲಾಕ್ ಡೌನ್ ಮಾಡಲಿಲ್ಲ. ಈಗ ಕೊರೊನಾ ಹರಡಿಬಿಟ್ಟಿದೆ. ಈಗ ಲಾಕ್‌ಡೌನ್ ಮಾಡಿ ಏನು ಪ್ರಯೋಜನ ಎಂದು ಪ್ರಶ್ನಿಸಿದರು.
ಕಳೆದ ಬಾರಿಯ ಲಾಕ್‌ಡೌನ್ ನಿಂದ ಜನಸಾಮಾನ್ಯರಿಗೆ ತುಂಬಾ ತೊಂದರೆಯಾಗಿದೆ. ಈಗ ಮತ್ತೆ ಲಾಕ್‌ಡೌನ್ ಮಾಡುವುದರಿಂದ ಪ್ರಯೋಜನ ಏನೂ ಆಗಲ್ಲ. ಕೊರೊನಾ ನಿಯಂತ್ರಣ ಮಾಡೋದು ಯಾರ ಕೈಯಲ್ಲೂ ಇಲ್ಲ, ಬರ್ತಾನೇ ಇದೆ. ಯಾರಿಗೆ ಸೋಂಕು ಬರುತ್ತೋ ಅವರನ್ನು ನಿಯಂತ್ರಣ ಮಾಡಬೇಕು ಎಂದು ಸಲಹೆ ನೀಡಿದರು.
ಗೋಕಾಕ್ ತಾಲೂಕಿನ ಒಂದೊಂದು ಊರಲ್ಲಿ ಒಂದೊಂದು ಪ್ರಕರಣಗಳಿವೆ. ಗೋಕಾಕ್‌ನಂತಹ ದೊಡ್ಡ ತಾಲೂಕು ನಿಯಂತ್ರಣ ಮಾಡೋದು ತುಂಬಾ ಕಷ್ಟ. ಆದೇಶ ಮಾಡೋದು ತುಂಬಾ ಸುಲಭ, ವ್ಯತಿರಿಕ್ತ ಪರಿಣಾಮ ಬಹಳ ಆಗುತ್ತೆ. ರಾಜ್ಯ ಸರ್ಕಾರ, ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳೋ ಬಗ್ಗೆ ಜನರು ಮುಂಜಾಗ್ರತೆ ವಹಿಸಬೇಕು ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಇದೇ ವೇಳೆ ಸಚಿವರ ವಿರುದ್ಧ ಗರಂ ಆದ ಕೆಪಿಸಿಸಿ ಕಾರ್ಯಾಧ್ಯಕ್ಷ, ಜಿಲ್ಲೆಯ ಸಚಿವರು ತಮ್ಮ ತಮ್ಮ ಕ್ಷೇತ್ರಗಳಿಗೆ ಸೀಮಿತರಾಗಿದ್ದಾರೆ. ಹಿಂದಿನಿಂದಲೂ ಸಚಿವರು ತಮ್ಮ ತಮ್ಮ ಕ್ಷೇತ್ರಕ್ಕೆ ಸೀಮಿತ ಆಗಿದ್ದಾರೆ. ಹೀಗಾಗಿ ಬೆಳಗಾವಿ ಜಿಲ್ಲಾಡಳಿತ ನಿಯಂತ್ರಣ ತಪ್ಪಿದೆ. ಅಧಿಕಾರಿಗಳದ್ದೊಂದು, ಮಂತ್ರಿಗಳದ್ದೊಂದು ನಿರ್ಧಾರ ಆಗಬಾರದು. ಜಿಲ್ಲಾಮಟ್ಟದ ಅಧಿಕಾರಿಗಳ ಜೊತೆ ಕುಳಿತು ಸಚಿವರು ಸಭೆ ಮಾಡಬೇಕು. ಎಲ್ಲರೂ ಸೇರಿ ಸಾಮೂಹಿಕ ನಿರ್ಧಾರ ಕೈಗೊಂಡರೆ ಒಳ್ಳೆಯದಾಗುತ್ತದೆ ಎಂದರು.








