ನಾನು ಬೆಳೆಯುವುದಕ್ಕೆ ಬಿಎಸ್ ವೈ ಕಾರಣ : ಈಶ್ವರಪ್ಪ ಭಾವುಕ
ಶಿವಮೊಗ್ಗ : ನಾನು ಇವತ್ತು ಬೆಳೆಯುವುದಕ್ಕೆ ಸಂಘ ಒಂದು ಕಾರಣ, ಮತ್ತೊಂದು ಕಾರಣ ಬಿಎಸ್.ಯಡಿಯೂರಪ್ಪ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಭಾವುಕರಾಗಿದ್ದಾರೆ.
ಸಾಮಾನ್ಯವಾಗಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಕೆ.ಎಸ್. ಈಶ್ವರಪ್ಪ ಮಧ್ಯೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಬಿ.ಎಸ್.ಯಡಿಯೂರಪ್ಪ ವಿರುದ್ಧ ಈಶ್ವರಪ್ಪ ಗುಂಪುಗಾರಿಕೆ ಮಾಡುತ್ತಾರೆ ಅನ್ನುವ ಮಾತುಗಳು ರಾಜಕೀಯ ಪಡಸಾಲೆಯನ್ನು ಹರಿದಾಡುತ್ತಲೇ ಇರುತ್ತದೆ.
ಬಿಎಸ್ ವೈ ಬಿಜೆಪಿ ತೊರೆದು ಕೆಜಿಪಿ ಕಟ್ಟಿದ್ದಾಗ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಈಶ್ವರಪ್ಪ, ಬಿ.ಎಸ್.ಯಡಿಯೂರಪ್ಪ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು.
ಬಹಿರಂಗ ವೇದಿಕೆಗಳಲ್ಲಿ ಯಡಿಯೂರಪ್ಪ ವಿರುದ್ಧ ವಾಗ್ಬಾಣಗಳನ್ನು ಬಿಟ್ಟಿದ್ದರು. ಹೀಗಾಗಿ ಈ ಇಬ್ಬರ ಮಧ್ಯೆ ಸಂಬಂಧ ಅಷ್ಟಕ್ಕಷ್ಟೆ ಅಂತಾ ಹೇಳಲಾಗುತ್ತಿತ್ತು.
ಈ ಬಗ್ಗೆ ಇಂದು ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿರುವ ಈಶ್ವರಪ್ಪ, ನಾನು ಇವತ್ತು ಬೆಳೆಯುವುದಕ್ಕೆ ಕಾರಣ ಒಂದು ಸಂಘ, ಮತ್ತೊಂದು ಕಾರಣ ಯಡಿಯೂರಪ್ಪ ಅವರು. ನಾನು ಏನಾದರೂ ಯಡಿಯೂರಪ್ಪ ವಿರುದ್ಧ ಗುಂಪು ಕಟ್ಟಿದರೆ, ಅದು ನಮ್ಮ ತಂದೆ ತಾಯಿಗೆ ಮಾಡಿದ ದ್ರೋಹದಂತೆ ಎಂದು ಭಾವುಕರಾಗಿ ನುಡಿದಿದ್ದಾರೆ.









