ಬೆಂಗಳೂರಿನ (Bengaluru) ಚಿನ್ನಸ್ವಾಮಿ ಕ್ರೀಡಾಂಗಣ (Chinnaswamy Stadium) .. ರಾಜ್ಯ ಕ್ರಿಕೆಟಿಗರ ಪಾಲಿನ ದೇಗುಲ.. ಕೆಎಸ್ಸಿಎ (KSCA) ಅದರ ಗರ್ಭಗುಡಿ. ಆದ್ರೆ ಆ ಗರ್ಭಗುಡಿಯಲ್ಲಿ ನಡೆಯುತ್ತಿರುವುದು ಮಾತ್ರ ಚಾಣಕ್ಯನನ್ನೇ ಮೀರಿಸುವಂತಹ ತಂತ್ರ – ಪ್ರತಿತಂತ್ರಗಳು (KSCA Election). ಇಲ್ಲಿ ಏನು ಬೇಕಾದ್ರೂ ಆಗಬಹುದು.. ಏನು, ಹೇಗೆ ಬೇಕಾದ್ರೂ ನಡೆಯಬಹುದು.. ಆದ್ರೆ ಯಾಕೆ ಎಂದು ಕೇಳುವ ಹಾಗಿಲ್ಲ. ಯಾಕೆಂದ್ರೆ, ಯಾರು ಕೂಡ ಊಹೆ ಮಾಡದ ರೀತಿಯ ಬೆಳವಣಿಗಳು ನಡೆಯುತ್ತವೆ. ಇಂದು ಜೊತೆಯಾಗಿದ್ದವರು ನಾಳೆ ಪ್ರತಿಸ್ಪರ್ಧಿಗಳು. ಆಪ್ತ ಮಿತ್ರರು ನಾಳೆ ಹಿತಶತ್ರುಗಳಾಗುತ್ತಾರೆ. ಅಧಿಕಾರದ ಗದ್ದುಗೆಗಾಗಿ ನಡೆಯುವ ರಾಜಕೀಯದ ಚದುರಂಗದಾಟದ ಮುಂದೆ ನಮ್ಮ ರಾಜಕೀಯ ನಾಯಕರು ಒಂದು ಹೆಜ್ಜೆ ಹಿಂದೆ ಇದ್ದಾರೆ ಅಂದ್ರೂ ಅಚ್ಚರಿ ಏನು ಇಲ್ಲ. ಯಾಕಂದ್ರೆ ಇಲ್ಲಿ ನಡೆಯುತ್ತಿರುವುದು ಬಣ್ಣ ಬಣ್ಣದ ಸೂಟ್ ಬೂಟ್ ಹಾಕೊಂಡಿರುವವರ ನಡುವಿನ ಪಕ್ಕಾ ವೈಟ್ ಕಾಲರ್ ಪಾಲಿಟಿಕ್ಸ್..!
ಹಾಗೇ ನೋಡಿದ್ರೆ ಕೆಎಸ್ಸಿಎ ಅಧಿಕಾರದ ಗದ್ದುಗೆ ಒಬ್ಬ ವ್ಯಕ್ತಿಯ ಹಿಡಿತದಲ್ಲಿರುವುದು ಇಂದು ನಿನ್ನೆಯ ಕಥೆಯಲ್ಲ. ಕಳೆದ 92 ವರ್ಷಗಳಿಂದಲೂ ಪ್ರಭಾವಿಗಳ ನೆರಳಿನಲ್ಲೇ ಬೆಳೆದು ಬಂದಿದೆ. ಹಾಗಂತ ಕೆಎಸ್ಸಿಎ ಪದಾಧಿಕಾರಿಗಳು ಏನು ಮಾಡಿಲ್ಲ ಅಂತಲ್ಲ. ಕೆಲವರು ಉತ್ತಮ ಆಡಳಿತ ನಡೆಸಿ ಹೆಸರು ಮಾಡಿದ್ದಾರೆ. ದುರಾಡಳಿತದಿಂದಲೂ ಸದ್ದು ಮಾಡಿದ್ದಾರೆ. ಹಾಗೇ ಕ್ರಿಕೆಟ್ ಆಟವನ್ನು ರಾಜ್ಯದಲ್ಲಿ ಬೆಳೆಸಿದ್ದಾರೆ. ಯುವ ಪ್ರತಿಭೆಗಳನ್ನು ಬೆಳಕಿಗೆ ತಂದಿದ್ದಾರೆ. ನ್ಯಾಯ -ಅನ್ಯಾಯ, ಪಾರದರ್ಶಕತೆ -ಭ್ರಷ್ಟಚಾರ, ಪ್ರಚಾರ- ಅಪಚಾರ, ಉತ್ತಮ ಆಡಳಿತ- ದುರಾಡಳಿತ, ಅಭಿವೃದ್ಧಿ – ವೈಫಲ್ಯ ಹೀಗೆ ಎಲ್ಲವೂ ಚಿನ್ನಸ್ವಾಮಿ ಕ್ರಿಕೆಟ್ ದೇಗುಲದ ಗರ್ಭಗುಡಿಯಲ್ಲಿ ನಡೆದಿದೆ.
ಅಂದ ಹಾಗೇ, ಕೆಎಸ್ಸಿಎನಲ್ಲಿ ಅಧ್ಯಕ್ಷ ಪಟ್ಟ ಎಂಬುದು ಅದು ಗೌರವದ ಸಂಕೇತ ಅಷ್ಟೇ. ಎಲ್ಲಾ ಹಿಡಿತವಿರುವುದು ಕಾರ್ಯದರ್ಶಿಯ ಕೈಯಲ್ಲಿ. ಹೀಗಾಗಿಯೇ ಕಾರ್ಯದರ್ಶಿ ಹುದ್ದೆಯ ಮೇಲೆ ಎಲ್ಲರ ಚಿತ್ತವಿರುತ್ತದೆ. ಕೆಎಸ್ಸಿಎ ಪದಾಧಿಕಾರಿಗಳ ಇತಿಹಾಸವನ್ನು ನೋಡುವುದಾದ್ರೆ, ಎಂ. ಚಿನ್ನಸ್ವಾಮಿ ಅವರು ಕೆಎಸ್ಸಿಎ ಕಾರ್ಯದರ್ಶಿಯಾಗಿ 25 ವರ್ಷಗಳ ಕಾಲ ಆಡಳಿತ ನಡೆಸಿದ್ದಾರೆ. ರಾಜ್ಯ ಕ್ರಿಕೆಟ್ಗೆ ನೀಡಿರುವ ಕೊಡುಗೆಗಾಗಿಯೇ ಚಿನ್ನಸ್ವಾಮಿ ಎಂಬ ಹೆಸರು ರಾಜ್ಯ ಕ್ರಿಕೆಟ್ ಮೈದಾನಕ್ಕೆ ಅಂಟಿಕೊಂಡಿದೆ. ನಂತರ ಸಿ.ನಾಗರಾಜ್ ಅವರು ಸುಮಾರು 20 ವರ್ಷಗಳ ಕಾಲ ಕೆಎಸ್ಸಿಎ ಚುಕ್ಕಾಣಿ ಹಿಡಿದಿದ್ದಾರೆ. ಇವರಿಬ್ಬರ ಆಡಳಿತದಲ್ಲಿ ರಾಜ್ಯ ಕ್ರಿಕೆಟ್ ಯಶಸ್ಸಿನ ಉತ್ತುಂಗಕ್ಕೇರಿತ್ತು. ಒಂದು ರೀತಿಯಲ್ಲಿ ರಾಜ್ಯ ಕ್ರಿಕೆಟ್ನ ಸುವರ್ಣಯುಗ. ಹಾಗಂತ ಆ ಕಾಲದಲ್ಲಿ ಏನೆಲ್ಲಾ ರಾಜಕೀಯ ನಡೆದಿದೆ ಎಂಬುದರ ಬಗ್ಗೆ ನನಗೆ ಸ್ಪಷ್ಟ ಮಾಹಿತಿ ಇಲ್ಲ. ಆದ್ರೆ ಇವರಿಬ್ಬರ ಆಡಳಿತದ ಅವಧಿಯಲ್ಲಿ ಭಾರತ ಕ್ರಿಕೆಟ್ ತಂಡಕ್ಕೆ ರಾಜ್ಯದ ಅಪ್ರತಿಮ ಆಟಗಾರರು ಎಂಟ್ರಿಯಾಗಿದ್ದರು. ಜೊತೆಗೆ ಸತತ ರಣಜಿ ಟ್ರೋಫಿ ಗೆಲುವು, ಕ್ಲಬ್ ಕ್ರಿಕೆಟ್.. ವಿವಿಧ ವಯೋಮಿತಿ ಕ್ರಿಕೆಟ್, ಜಿಲ್ಲಾ ಕ್ರಿಕೆಟ್ ಲೀಗ್ ಸೇರಿದಂತೆ ರಾಜ್ಯದಲ್ಲಿ ಕ್ರಿಕೆಟ್ ಆಟವನ್ನು ಪಸರಿಸುವಂತೆ ಮಾಡಿದ್ದರು. ಹೀಗೆ ಕರ್ನಾಟಕ ಕ್ರಿಕೆಟ್ ಅನ್ನು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಲು ಭದ್ರ ಬುನಾದಿ ಹಾಕಿಕೊಟ್ಟಿದ್ದರು ಎಂಬುದು ಅಷ್ಟೇ ಸತ್ಯ.
ಆದ್ರೆ 1998ರಿಂದ ಕೆಎಸ್ಸಿಎನಲ್ಲಿ ಗದ್ದುಗೆ ಗುದ್ದಾಟ ಶುರುವಾಯ್ತು. ಅಲ್ಲಿಯ ತನಕ ಕ್ರಿಕೆಟ್ ಕ್ಲಬ್ ಮಾಲೀಕರು, ಕ್ರಿಕೆಟ್ ಪೋಷಕರು ಕೆಎಸ್ಸಿಎ ಪದಾಧಿಕಾರಿಗಳಾಗಿ ನೇಮಕಗೊಳ್ಳುತ್ತಿದ್ದರು. ಆಗಲೇ ನೋಡಿ ರಾಜ್ಯ ಕ್ರಿಕೆಟ್ನ ಗರ್ಭಗುಡಿಗೆ ಎಂಟ್ರಿಯಾಗಿದ್ದು ರಾಜ್ಯ ಕ್ರಿಕೆಟ್ ಚಾಣಕ್ಯ ಭಾರತ ತಂಡದ ಮಾಜಿ ಆಟಗಾರ ಬ್ರಿಜೇಶ್ ಪಟೇಲ್.
ಎರಡು ದಶಕಗಳ ಕಾಲ ಕೆಎಸ್ಸಿಎ ಆಡಳಿತ ನಡೆಸಿದ್ದ ಸಿ.ನಾಗರಾಜ್ ಜೊತೆ ಉತ್ತಮ ಸಂಬಂಧ ಹೊಂದಿದ್ದ ಬ್ರಿಜೇಶ್ ಪಟೇಲ್ ಕೆಎಸ್ಸಿಎ ಅಧಿಕಾರಕ್ಕಾಗಿ ಹೊಸ ತಂತ್ರವನ್ನು ರೂಪಿಸಿದ್ದರು. ಕ್ರಿಕೆಟ್ ಆಟಗಾರರೇ ಕೆಎಸ್ಸಿಎ ಆಡಳಿತ ನಡೆಸಬೇಕು ಎಂಬ ಸಿದ್ಧಾಂತದೊಂದಿಗೆ ಕೆಎಸ್ಸಿಎ ಅಖಾಡಕ್ಕೆ ಧುಮುಕಿದ್ರು. ಹೀಗಾಗಿ ಆಪ್ತರಾಗಿದ್ದ ಸಿ.ನಾಗರಾಜ್ ವಿರುದ್ಧವೇ ಸ್ಪರ್ಧೆ ಮಾಡಿ ಬ್ರಿಜೇಶ್ ಪಟೇಲ್ ಕೆಎಸ್ಸಿಎ ಗರ್ಭಗುಡಿಗೆ ಪ್ರವೇಶ ಮಾಡಿದ್ದರು.
ಅಲ್ಲಿಂದ ಶುರುವಾಯ್ತು ನೋಡಿ ಕೆಎಸ್ಸಿಎನಲ್ಲಿ ಬ್ರಿಜೇಶ್ ಪಟೇಲರದ್ದೇ ದರ್ಬಾರು. ಅಷ್ಟೇ ಅಲ್ಲ, ಕಳೆದ 27 ವರ್ಷಗಳಿಂದ ಕೆಎಸ್ಸಿಎ ಗದ್ದುಗೆಯನ್ನು ಬೆರಳ ತುದಿಯಲ್ಲಿ ಆಡಿಸಿಕೊಂಡು ಬರುತ್ತಿದ್ದಾರೆ. 1998ರಿಂದ 2010ರವರೆಗೆ ಹಾಗೂ 2013ರಿಂದ 2017ರವರೆಗೆ ಒಟ್ಟು 15 ವರ್ಷ ಕೆಎಸ್ಸಿಎ ಕಾರ್ಯದರ್ಶಿಯಾಗಿ ಬ್ರಿಜೇಶ್ ಪಟೇಲ್ ಕಾರ್ಯ ನಿರ್ವಹಿಸಿದ್ದಾರೆ. ಇವರ ಆಡಳಿತದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ನಡೆದಿದ್ರೂ ಅಷ್ಟೇ ಭ್ರಷ್ಟಚಾರ, ತಾರತಮ್ಯದ ಆರೋಪಗಳು ಕೇಳಿಬಂದಿದ್ದವು. ಆದ್ರೆ ಬ್ರಿಜೇಶ್ ಪಟೇಲ್ ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ. ಯಾಕಂದ್ರೆ ಪಟೇಲ್ ಸಾಹೇಬ್ರು ಕೆಎಸ್ಸಿಎ ಗದ್ದುಗೆಯನ್ನು ಪೆವಿಕಲ್ ಗಮ್ನಂತೆ ಗಟ್ಟಿಯಾಗಿ ಹಿಡಿದಿಟ್ಟುಕೊಂಡಿದ್ದರು.
ಹೇಳಿದ್ದೇ ಮಾತು.. ಆಡಿದ್ದೇ ಆಟ.. ಆದ್ರೆ ಇದು ಹೆಚ್ಚು ಸಮಯ ನಡೆಯಲ್ಲ ಎಂಬ ಮಾತಿನಂತೆ ಪಟೇಲರ ವಿರುದ್ಧ ಅಪಸ್ವರಗಳು ಮೊಳಗಲು ಶುರುವಾದವು.
ಅದು 2007ರ ಕೆಎಸ್ಸಿಎ ಚುನಾವಣೆ.. ಕೆಎಸ್ಸಿಎ ಇತಿಹಾಸದಲ್ಲೇ ಇಷ್ಟೊಂದು ರಣರೋಚಕ ಚುನಾವಣೆ ಹಿಂದೆ ನಡೆದಿರಲಿಲ್ಲ. ಮುಂದೆ ನಡೆಯುವುದೂ ಇಲ್ಲ ಅನ್ಸುತ್ತೆ. ಜಿದ್ದಾಜಿದ್ದಿನ ಅಖಾಡದಲ್ಲಿ ತನಗೆ ಹಿನ್ನೆಡೆಯಾಗುತ್ತೆ ಅಂತ ಬಹುಶಃ ಪಟೇಲರು ಸಣ್ಣ ಊಹೆ ಕೂಡ ಮಾಡಿರಲಿಲ್ಲ. ಒಂದು ರೀತಿ ವನ್ ಮೇನ್ ಆರ್ಮಿ ರೀತಿಯಲ್ಲೇ ಆಡಳಿತ ನಡೆಸುತ್ತಿದ್ದ ಪಟೇಲರ ವಿರುದ್ಧ ಸಮಾನಮನಸ್ಕ ತಂಡವೊಂದು ತಿರುಗಿಬಿದ್ದಿತ್ತು. ಕೃಷ್ಣ, ವಿನಯ್ ಮೃತ್ಯುಂಜಯ, ಬಿ.ಕೆ. ರವಿ ಸೇರಿಕೊಂಡು ಮೈಸೂರು ಮಹಾರಾಜರನ್ನು ಕೆಎಸ್ಸಿಎ ಚುನಾವಣಾ ಅಖಾಡಕ್ಕೆ ಧುಮುಕುವಂತೆ ಮಾಡಿದ್ದರು. ಅಧ್ಯಕ್ಷ ಸ್ಥಾನಕ್ಕೆ ಮಹಾರಾಜರು ಸ್ಪರ್ಧೆ ಮಾಡುತ್ತಿದ್ದಂತೆ ಕೆಎಸ್ಸಿಎ ಚುನಾವಣೆಯ ಚಿತ್ರಣವೇ ಬದಲಾಗಿ ಹೋಗಿತ್ತು. ಗೆದ್ದೇ ಗೆಲ್ಲುತ್ತೇವೆ ಎಂಬ ಆತ್ಮವಿಶ್ವಾಸದಲ್ಲಿದ್ದ ಬ್ರಿಜೇಶ್ ಪಟೇಲ್ ಬಣಕ್ಕೆ ಮೈಸೂರು ಮಹಾರಾಜ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಬಣ ಠಕ್ಕರ್ ನೀಡಿತ್ತು. ಅಧ್ಯಕ್ಷರಾಗಿ ಮಹಾರಾಜ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಹಾಗೂ, ಕಾರ್ಯದರ್ಶಿಯಾಗಿ ಸತತ ನಾಲ್ಕನೇ ಬಾರಿ ಬ್ರಿಜೇಶ್ ಪಟೇಲ್ ಆಯ್ಕೆಯಾಗಿದ್ದರು. 2007ರಿಂದ 2010ರವರೆಗೆ ಮಹಾರಾಜ – ಪಟೇಲ್ ಸಮ್ಮಿಶ್ರ ಸರ್ಕಾರದಂತೆ ಕೆಎಸ್ಸಿಎನಲ್ಲಿ ಆಡಳಿತ ನಡೆಸಿತ್ತು. ಆದ್ರೂ ಪಟೇಲರು ಮಾತ್ರ ಅಧಿಕಾರದ ಸೂತ್ರವನ್ನು ಬಿಟ್ಟುಕೊಟ್ಟಿರಲಿಲ್ಲ. ಜಟಾಪಟಿ, ಕೈಕೈ ಮಿಲಾಯಿಸಿಕೊಂಡು ಅಧಿಕಾರ ನಡೆಸಿದ್ರೂ ಕೆಲವೊಂದು ಮಹತ್ವದ ಸುಧಾರಣೆಗಳು ಆಗಿದ್ದವು. ಅಲ್ಲದೆ ಮಹಾರಾಜರ ಕನಸಿನ ಕೂಸು ಕರ್ನಾಟಕ ಪ್ರೀಮಿಯರ್ ಲೀಗ್ ಕೂಡ ಅಸ್ತಿತ್ವಕ್ಕೆ ಬಂದಿತ್ತು. ಹಾಗೇ ಪಟೇಲರ ಏಕಾಚಕ್ರಾಧಿಪತ್ಯಕ್ಕೆ ಕೊಂಚ ಬ್ರೇಕ್ ಕೂಡ ಬಿದ್ದಿತ್ತು.
ಇದನ್ನೂ ಓದಿ: ಏಳು ವರ್ಷಗಳ ನಂತ್ರ “ಆ” ಟೂರ್ನಿಯಲ್ಲಿ ಆಡಲಿರುವ ರೋಹಿತ್ ಶರ್ಮಾ
ಆದ್ರೆ 2010ರ ಚುನಾವಣೆಯಲ್ಲಿ ಪಟೇಲರು ಸ್ಪರ್ಧೆಯಿಂದ ಹಿಂದೆ ಸರಿದಿದ್ದರು. ಕಾರಣ ಅನಿಲ್ ಕುಂಬ್ಳೆ, ಶ್ರೀನಾಥ್ ಎಂಟ್ರಿ. ಕ್ರಿಕೆಟಿಗರು ಕ್ರಿಕೆಟ್ ಸಂಸ್ಥೆಯ ಆಡಳಿತ ನಡೆಸಬೇಕು ಎಂಬ ಪಟೇಲರ ಸೂತ್ರವನ್ನೇ ಕುಂಬ್ಳೆ ಮತ್ತು ಶ್ರೀನಾಥ್ ಚುನಾವಣೆಯಲ್ಲಿ ದಾಳವನ್ನಾಗಿ ಬಳಸಿಕೊಂಡಿದ್ದರು. ಆದ್ರೆ ಚಾಣಕ್ಯ ಬ್ರಿಜೇಶ್ ಪಟೇಲ್ ಅನಿಲ್ ಕುಂಬ್ಳೆ ಬಣಕ್ಕೆ ಬೆಂಬಲ ನೀಡಿದರು. ಆದ್ರೂ 2010ರಿಂದ 2013ರವರೆಗೆ ಅನಿಲ್ ಕುಂಬ್ಳೆ ಅಧ್ಯಕ್ಷರಾಗಿ ಮತ್ತು ಶ್ರೀನಾಥ್ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಈ ಅವಧಿಯಲ್ಲಿ ಹಲವಾರು ಸುಧಾರಣೆಗಳನ್ನು ಜಾರಿಗೆ ತಂದ್ರೂ ನಂತರದ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಕುಂಬ್ಳೆ ಹಾಗೂ ಶ್ರೀನಾಥ್ ಮನಸ್ಸು ಮಾಡಲಿಲ್ಲ. ಆಡಳಿತ ನಡೆಸಿ ರಾಜ್ಯ ಕ್ರಿಕೆಟ್ ಅನ್ನು ಉದ್ದಾರ ಮಾಡುವ ಉಮೇದಿನಲ್ಲಿದ್ದ ಕುಂಬ್ಳೆ ಟೀಮ್ನ ಸದಸ್ಯರು ಒಬ್ಬೊಬ್ಬರಾಗಿ ಕ್ರಿಕೆಟ್ ಕೋಚಿಂಗ್, ಮ್ಯಾಚ್ ರೆಫ್ರಿ, ವೀಕ್ಷಕ ವಿವರಣೆಯ ಕಾಯಕಕ್ಕೆ ಮುಂದಾದ್ರು. ಕೆಎಸ್ಸಿಎನ ರಾಜಕೀಯವೇ ಬೇಡ ಅಂತ ದೂರವಾಗಿಬಿಟ್ರು. ಅಷ್ಟೇ ಅಲ್ಲ, ಕುಂಬ್ಳೆ – ಶ್ರೀನಾಥ್ ಟೀಮ್ನ ಆಡಳಿತ ವೈಖರಿಯ ಬಗ್ಗೆಯೂ ಅಸಮಾಧಾನದ ಮಾತುಗಳು ಕೇಳಿಬಂದಿದ್ದವು. ಬಹುಶಃ ಈ ಕಾರಣಗಳಿಂದ ಮತ್ತೆ ಕೆಎಸ್ಸಿಎ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಮುಂದಾಗಲಿಲ್ಲ. ಆದ್ರೂ ತನ್ನ ಬೆಂಬಲಿಗರನ್ನು ಅಖಾಡಕ್ಕಿಳಿಸಿದ್ರೂ ಜಯ ಮಾತ್ರ ಲಭಿಸಲಿಲ್ಲ.
ಪರಿಣಾಮ, ಮೂರು ವರ್ಷ ಕೆಎಸ್ಸಿಎನಿಂದ ದೂರವೇ ಉಳಿದಿದ್ದ ಬ್ರಿಜೇಶ್ ಪಟೇಲ್ಗೆ ಕೆಎಸ್ಸಿಎ ಗರ್ಭಗುಡಿಗೆ ಸುಲಭವಾಗಿ ಪ್ರವೇಶ ಸಿಕ್ಕಿತ್ತು. ಆರು ವರ್ಷಗಳ ಹಿಂದೆ ಹಾವು – ಮುಂಗೂಸಿಯಂತೆ ಕಚ್ಚಾಡುತ್ತಿದ್ದ ಮಹಾರಾಜ ಮತ್ತು ಪಟೇಲರು ಮುನಿಸು ಮರೆತು 2013ರಲ್ಲಿ ಆಪ್ತಮಿತ್ರರಾದ್ರು. ಹೀಗಾಗಿ ಮತ್ತೆ ಬ್ರಿಜೆಟ್ ಪಟೇಲ್ ಕಾರ್ಯದರ್ಶಿಯಾಗಿ ಹಾಗೂ ಮಹಾರಾಜರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಬಳಿಕ ಮಹಾರಾಜರ ನಿಧನದ ನಂತ್ರ ಅಶೋಕ್ ಆನಂದ್ ಅಧ್ಯಕ್ಷರಾಗಿ ನೇಮಕಗೊಂಡಿದ್ದರು.
ಇನ್ನು, 2017ರಿಂದ ಬ್ರಿಜೇಶ್ ಪಟೇಲ್ ಕೆಎಸ್ಸಿಎ ಚಾವಡಿಯಿಂದ ದೂರವೇ ಉಳಿದಿದ್ದಾರೆ. ಆದ್ರೂ ಕೆಎಸ್ಸಿಎ ಗದ್ದುಗೆಯಲ್ಲಿ ತನ್ನ ಆಪ್ತರನ್ನು ಕೂರಿಸಲು ಮಾತ್ರ ಸಫಲರಾಗಿದ್ದರು. ಈಗಲೂ ಪಟೇಲರ ಹವಾ ಏನೂ ಕಡಿಮೆಯಾಗಿಲ ಎಂಬುದು ಕೂಡ ಸುಳ್ಳಲ್ಲ. ಆದ್ರೆ ಕಾಲ ಬದಲಾಗಿದೆ. ದಿನಗಳು ಉರುಳಿ ಹೋಗಿವೆ. ಮನಸುಗಳು ಕೂಡ ಚೇಂಜ್ ಆಗಿವೆ. ಇದು ಪ್ರಕೃತಿ ಮತ್ತು ಮನಷ್ಯನ ಸಹಜ ಗುಣ. ಪರಿಣಾಮ ಒಂದು ಕಾಲದಲ್ಲಿ ತನ್ನ ಕಟ್ಟಬೆಂಬಲಿಗರು ಈಗ ಪಟೇಲರ ವಿರುದ್ಧವೇ ಮುನಿಸಿಕೊಂಡಿದ್ದಾರೆ. ಹಾಗಾಗಿ ಈ ಬಾರಿಯ ಚುನಾವಣೆಯಲ್ಲಿ ಕೆಲವರು ಸೈಲೆಂಟ್ ಆಗಿದ್ರೆ, ಮತ್ತೆ ಕೆಲವರು ನೇರವಾಗಿ ಪಟೇಲರಿಗೆ ಟಾಂಗ್ ಕೊಡಲು ಟೊಂಕಕಟ್ಟಿ ನಿಂತಿದ್ದಾರೆ.
ಇದೀಗ ಕೆಎಸ್ಸಿಎ ಚುನಾವಣೆ ಮತ್ತೆ ರಂಗೇರುತ್ತಿದೆ. ನವೆಂಬರ್ 30ರಂದು ರಾಜ್ಯದ ಪ್ರತಿಷ್ಠಿತ ಕ್ರೀಡಾ ಸಂಸ್ಥೆಯಾಗಿರುವ ಕೆಎಸ್ಸಿಎ ಚುನಾವಣೆ ನಡೆಯುತ್ತಿದೆ.
ಈಗಾಗಲೇ ಟೀಮ್ ಇಂಡಿಯಾದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ & ಟೀಮ್ ಚುನಾವಣಾ ಅಖಾಡವನ್ನು ಪ್ರವೇಶಿಸಿದೆ. 2010ರಲ್ಲಿ ಉಪಾಧ್ಯರಾಗಿದ್ದ ವೆಂಕಿ ತಂಡವನ್ನು ಮಹಾರಾಜರ ಆಪ್ತರಾಗಿದ್ದ ವಿನಯ್ ಮೃತ್ಯುಂಜಯ ಸೇರಿಕೊಂಡಿದ್ದಾರೆ. ಹಾಗೇ ಟೀಮ್ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಸುಜಿತ್ ಸೋಮಸುಂದರ್ ಕೂಡ ಸಾಥ್ ನೀಡಿದ್ದಾರೆ. ಅಚ್ಚರಿ ಅಂದ್ರೆ ಪಟೇಲರ ಕಟ್ಟ ಬೆಂಬಲಿಗ ಸಂತೋಷ್ ಮೇನನ್ ಈ ಬಾರಿ ವೆಂಕಿ ತಂಡದ ಜೊತೆ ಗುರುತಿಸಿಕೊಂಡಿದ್ದಾರೆ.
ಈ ನಡುವೆ, ಚಾಣಕ್ಷ ಬ್ರಿಜೇಶ್ ಪಟೇಲ್ ಕೆಎಸ್ಸಿಎ ಹಿಡಿತ ತಪ್ಪಿಸಿಕೊಳ್ಳಬಾರದು ಎಂಬ ನಿಟ್ಟಿನಲ್ಲಿ ಸೂತ್ರಧಾರಿಯಂತೆ ಕೆಲಸ ಮಾಡುತ್ತಿದ್ದಾರೆ. ಕೊನೆಯ ತನಕ ಗುಟ್ಟುಬಿಟ್ಟುಕೊಡದ ಪಟೇಲರು ಇದೀಗ ಹಿರಿಯ ಪತ್ರಿಕೋದ್ಯಮಿ ಕೆ.ಎನ್. ಶಾಂತಕುಮಾರ್ ಅವರಿಗೆ ಬೆಂಬಲವನ್ನು ನೀಡಿದ್ದಾರೆ. ಹಾಗೇ ದಶಕಗಳ ಹಿಂದೆ ಪಟೇಲರ ವಿರುದ್ಧ ತಿರುಗಿಬಿದ್ದಿದ್ದ ಬಿ.ಕೆ. ರವಿ ಈ ಬಾರಿ ಪಟೇಲರ ಜೊತೆ ಗುರುತಿಸಿಕೊಂಡಿದ್ದಾರೆ. ಅದಕ್ಕೆ ಅನ್ನೋದು ಯಾರು ಮಿತ್ರರೂ ಅಲ್ಲ.. ಯಾರು ಶತ್ರುಗಳು ಅಲ್ಲ.. ಸಮಯಕ್ಕೆ ತಕ್ಕಂತೆ ಬದಲಾವಣೆ ಕೂಡ ಜಗದ ನಿಯಮ ಅನ್ಸುತ್ತೆ.
ಅದೇನೇ ಇರಲಿ, ಸದ್ಯ ರಾಜ್ಯ ಕ್ರಿಕೆಟ್ಗೆ ಹೊಸ ಚೈತನ್ಯ ತುಂಬಬೇಕಿದೆ. ಆಡಳಿತದಲ್ಲಿ ಪಾರದರ್ಶಕತೆ ಮತ್ತು ಸರಿಯಾದ ವ್ಯವಸ್ಥೆಯನ್ನು ಮತ್ತೆ ಜಾರಿಗೊಳಿಸಬೇಕಿದೆ. ಯುವ ಕ್ರಿಕೆಟಿಗರ ಪ್ರತಿಭೆಯನ್ನು ಬೆಳಕಿಗೆ ತರುವ ಪ್ರಯತ್ನವನ್ನು ಮಾಡಬೇಕಿದೆ. ಕಳೆದು ಹೋಗಿರುವ ಗತ ವೈಭವವನ್ನು ಮತ್ತೆ ಮರುಕಳಿಸಬೇಕಿದೆ. ರಾಜ್ಯ ಕ್ರಿಕೆಟ್ನ ಭವಿಷ್ಯ ಬಗ್ಗೆ ದೂರದೃಷ್ಟಿ ಹೊಂದಿರುವಂತಹವರು ಆಡಳಿತದ ಚುಕ್ಕಾಣಿ ಹಿಡಿದ್ರೆ ಒಳಿತು. ಯಾರೇ ಗೆದ್ರೂ ಮತ್ತೆ ಸೂತ್ರದ ಕೈಗೊಂಬೆಯಾಗೋದು ಮಾತ್ರ ಬೇಡ. ಎಂ.ಚಿನ್ನಸ್ವಾಮಿ ಮತ್ತು ಸಿ. ನಾಗರಾಜ್ನಂತಹ ಮತ್ತೊಬ್ಬ ಆಡಳಿತಗಾರ ನಮ್ಮ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಬೇಕಿದೆ. ಕೆಎಸ್ಸಿಎ ಕ್ಲಬ್ ಸದಸ್ಯರು ಕೇವಲ ತಮಗೆ ನೀಡುವ ಸವಲತ್ತುಗಳ ಬಗ್ಗೆ ಗಮನ ಹರಿಸದೇ ಕ್ರಿಕೆಟ್ ಆಟವನ್ನು ಉದ್ದಾರ ಮಾಡೋವವರಿಗೆ ಕೆಎಸ್ಸಿಎ ಚುಕ್ಕಾಣಿಯನ್ನು ನೀಡಬೇಕು. ಯೋಚಿಸಿ ಮತ ಹಾಕಿ.. ನಮ್ಮ ನಾಡಿನ ಹೆಮ್ಮೆಯ ಕ್ರಿಕೆಟ್ ಸಂಸ್ಥೆಯ ಭವಿಷ್ಯ ನಿಮ್ಮ ಕೈಯಲ್ಲಿದೆ. ಅಷ್ಟು ಮಾತ್ರ ಹೇಳಬಹುದು..!
ಲೇಖನ: ಸನತ್ ರೈ
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








