ಗಮನಿಸಿ : ಮೇ 10ರವರೆಗೆ ಬಸ್, ಮೆಟ್ರೋ ಸಂಚಾರ ಬಂದ್
ಬೆಂಗಳೂರು : ಕೊರೊನಾಗೆ ಬ್ರೇಕ್ ಹಾಕಲು ಸರ್ಕಾರ ನಾಳೆ ರಾತ್ರಿ 9 ಗಂಟೆಯಿಂದ ಮುಂದಿನ 14 ದಿನಗಳ ಕಾಲ ಕೊರೊನಾ ಕಫ್ರ್ಯೂ ಘೋಷಣೆ ಮಾಡಿದೆ.
ಈ ಹಿನ್ನೆಲೆ ಇಡೀ ಕರುನಾಡು ಸಂಪೂರ್ಣ ಸ್ತಬ್ಧವಾಗಲಿದೆ.
ಕೊರೊನಾ ಸ್ಫೋಟ ಹಿನ್ನೆಲೆಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ, ರಾಜ್ಯದಲ್ಲಿ ಉಚಿತ ಕೊರೊನಾ ಲಸಿಕೆ ನೀಡುವುದಾಗಿ ಘೋಷಣೆ ಮಾಡಿದ್ರು.
ಬಳಿಕ ಮುಂದಿನ 14 ದಿನಗಳ ಕಾಲ ಕಟ್ಟುನಿಟ್ಟಿನ ಕ್ರಮಗಳನ್ನ ತೆಗೆದುಕೊಳ್ಳುವುದಾಗಿ ತಿಳಿಸಿದರು.
ಲಾಕ್ ಡೌನ್ ಪದ ಬಳಕೆ ಮಾಡದೇ ಅಘೋಷಿತ ಲಾಕ್ ಡೌನ್ ಘೋಷಿಸಿದರು.
ಮುಖ್ಯವಾಗಿ ಸಾರಿಗೆ ಬಸ್ ಗಳ ಸಂಚಾರ ಸಂಪೂರ್ಣವಾಗಿ ಬಂದ್ ಆಗಲಿದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು.
ಉಳಿದಂತೆ ಬೆಳಗ್ಗೆ 6 ಗಂಟೆಯಿಂದ ಬೆಳಗ್ಗೆ 10ರವರೆಗೆ ಮಾತ್ರ ಅಗತ್ಯವಸ್ತುಗಳ (ದಿನಸಿ, ತರಕಾರಿ, ಹಾಲು, ಹಣ್ಣು) ಖರೀದಿಗೆ ಅವಕಾಶ ಕಲ್ಪಿಸಲಾಗಿದೆ.
ಇನ್ನು ಮದ್ಯದಂಗಡಿಗಳಿಗೆ ಸಮಯ ನಿಗದಿ ಪಡಿಸಲು ಸರ್ಕಾರ ಮುಂದಾಗಿದೆ. ಮಾರ್ಗಸೂಚಿ ಕೆಲವೇ ಗಂಟೆಗಳಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಿದ್ದಾರೆ.










