Bangalore – ಕುಲಾಲ ಸಮುದಾಯದ ಅಭಿವೃದ್ದಿ ನಿಗಮ ಸ್ಥಾಪನೆಗೆ ಆಗ್ರಹ
ಬೆಂಗಳೂರು ಕುಲಾಲ ಸಂಘದ 50ನೇ ವರ್ಷದ ಸುವರ್ಣ ಸಂಭ್ರಮ
ಬೆಂಗಳೂರು : ಆರ್ಥಿಕ, ರಾಜಕೀಯ ಹಾಗೂ ಸಾಮಾಜಿಕವಾಗಿ ಹಿಂದುಳಿದ ಕುಲಾಲ ಸಮುದಾಯದ ಅಭಿವೃದ್ದಿಗಾಗಿ ನಿಗಮ ಸ್ಥಾಪನೆ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಬೆಂಗಳೂರು ಕುಲಾಲ ಸಂಘ ಒತ್ತಾಯಿಸಿದೆ.
ಬೆಂಗಳೂರು ಕುಲಾಲ ಸಂಘದ 50ನೇ ವರ್ಷದ ಸುವರ್ಣ ಸಂಭ್ರಮ ಹಿನ್ನಲೆಯಲ್ಲಿ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಇಂದು ಕುಲಾಲ ಸಂಘ ಬೆಂಗಳೂರು ವತಿಯಿಂದ ಸುವರ್ಣ ಸಂಭ್ರಮೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಇದರ ಸಮಾರೋಪ ಸಮಾರಂಭದಲ್ಲಿ ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಅವರು ಭಾಗಿಯಾಗಿದ್ದರು.
ಈ ವೇಳೆ ಸಂಘದ ವತಿಯಿಂದ ಸಚಿವರನ್ನು ಸನ್ಮಾನಿಸಲಾಯಿತು.
ಹಾಗೇ ಕುಲಾಲ ಸಮುದಾಯದ ಅಭಿವೃದ್ದಿಗಾಗಿ ನಿಗಮ ಸ್ಥಾಪನೆ ಮಾಡಬೇಕು ಎಂದು ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಈ ಮನವಿಗೆ ಧನಾತ್ಮಕವಾಗಿ ಸ್ಪಂದಿಸಿದ ಸಚಿವರು, ಕುಲಾಲ ಸಂಘದ ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ಮಚ್ಚುಗೆ ವ್ಯಕ್ತಪಡಿಸಿದರು, ಹಾಗೇ ಕುಲಾಲ ಸಂಘಕ್ಕಾಗಿ ಬೆಂಗಳೂರಿನಲ್ಲಿ ಕಟ್ಟಡ ನಿರ್ಮಿಸಲು ಸ್ಥಳ ನೀಡುವುದಾಗಿ ಭರವಸೆ ನೀಡಿದರು.
ಜೊತೆಗೆ ಸಮುದಾಯ ಸರ್ವತೋಮುಖ ಅಭಿವೃದ್ಧಿಗಾಗಿ ಬೇಕಾದ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಇದೇ ವೇಳೆ ಶ್ರೀಧಾಮ ಮಾಣಿಲದ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು, ಸಾಮಾನ್ಯವಾಗಿ ಸ್ವಾಮೀಜಿಗಳು ತಮ್ಮ ತಮ್ಮ ಮಠಕ್ಕೆ ಸರ್ಕಾರದಿಂದ ಅನುದಾನ ಕೊಡಿಸಿ ಅಂತಾ ಮನವಿ ಮಾಡುತ್ತಾರೆ.
ಆದ್ರೆ ಸ್ವಾಮೀಜಿಯವರು ಕುಲಾಲ ಸಮುದಾಯಕ್ಕೆ ಬೆಂಬಲವಾಗಿ ನಿಂತಿರೋದು ಸಂತೋಷದ ವಿಷಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದಕ್ಕೂ ಮೊದಲು ಕಾರ್ಯಕ್ರಮದಲ್ಲಿ ಮಾತನಾಡಿದ ಕುಲಾಲ ಸಂಘದ ಅಧ್ಯಕ್ಷರು ಪುರುಷೋತ್ತಮ್ ಚೇಂಡ್ಲಾ, ಬಹಕಾಲದಿಂದಲೂ ಕುಲಾಲ ಸಮುದಾಯವು ಶೋಷಣೆಗೆ ಒಳಗಾಗಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಅತೀ ಹಿಂದುಳಿದ ಸಮುದಾಯವಾಗಿ ಉಳಿದಿದೆ. ಕುಲಾಲ ಸಂಘವನ್ನು 1969ರಲ್ಲಿ ಸ್ಥಾಪನೆ ಮಾಡಲಾಯಿತು.
ಸಂಘ ಸ್ಥಾಪನೆಯಾಗಿ ಸುಮಾರು ಐವತ್ತು ಸಂವತ್ಸರಗಳೇ ಕಳೆದಿದೆ. ಬೆಂಗಳೂರಲ್ಲಿ ಆಗ ನೂರಿನ್ನೂರರಷ್ಟಿದ್ದ ಕುಲಾಲರ ಜನಸಂಖ್ಯೆ ಹಾಲಿ ಐದಾರು ಸಾವಿರ ದಾಟಿದೆ.
ಕಳೆದ ಐವತ್ತಕ್ಕೂ ಅಧಿಕ ವರ್ಷಗಳಿಂದಲೂ ಸಂಘವು ಸಮುದಾಯದ ಅಭಿವೃದ್ಧಿಗಾಗಿ ಶ್ರಮಿಸುತ್ತಾ ಬಂದಿದೆ.
ಹೀಗಿದ್ದರೂ ಕುಲಾಲ ಸಮುದಾಯ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದೆ.
ಹೀಗಾಗಿ ಸಮಾಜವನ್ನು ಮುಖ್ಯವಾಹಿನಿಗೆ ತರಲು ಸರಕಾರ ನಿಗಮ ಸ್ಥಾಪನೆ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಿದರು.
ಈ ಕಾರ್ಯಕ್ರಮದಲ್ಲಿ ಬೆಂಗಳೂರು ಕುಲಾಲ ಸಂಘದ ಗೌರವಾಧ್ಯಕ್ಷರು ಜಿ.ಈಶ್ವರ ಮೂಲ್ಯ, ಪ್ರಧಾನ ಕಾರ್ಯದರ್ಶಿ ಶಂಕರ ಕುಲಾಲ್ ಜನ್ನಾಡಿ, ಭರತ್ ಸೌಂದರ್ಯ ಸೇರಿದಂತೆ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.
ಇದಲ್ಲದೆ ಸಮಾರೋಪ ಕಾರ್ಯಕ್ರಮದಲ್ಲಿ ಮಹಾಲಕ್ಷ್ಮೀ ಕ್ಷೇತ್ರ, ಶ್ರೀಧಾಮ ಮಾಣಿಲದ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಆಶೀರ್ವಚನ ನೀಡಿದರು. ಕು.ವಿ.ಕು ರವರ ಆಸ್ತಿ ತುಳು ಕಥಾ ಸಂಕಲನ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಶ್ರೀಮತಿ ಕುಶಲಾಕ್ಷೀ ವಿ ಕಣ್ವತೀರ್ಥ (ಸಾಹಿತ್ಯ), ನಾಗೇಶ್ ಕುಲಾಲ್ ನಾಗರಕೊಡಗೆ ( ಯಕ್ಷಗಾನ ಭಾಗವತರು), ಕರಿಸಿದ್ದಪ್ಪ ಕುಂಬಾರ ( ಸಂಶೋಧನಾಧಿಕಾರಿ ಕುಂಬಾರರ ಕುಲ ಶಾಸ್ತ್ರಯ ಅಧ್ಯಯನ ಕೇಂದ್ರ ಹಂಪಿ), ಹೆಚ್ ಡಕೆ ನಯನಾಡು ( ಸಾಹಿತಿ, ರಂಗನಟ) ಮಂಜುನಾಥ್ ಕುಲಾಲ್ ಹಿಲಿಯಾಣ ( ಸಾಹಿತಿ, ನಿರೂಪಕರು), ಮನೋಜ್ ಕುಲಾಲ್ ಪುತ್ತೂರು ( ನಟರು), ಭರತ್ ಸೌಂದರ್ಯ ( ಜನಸೇವೆ, ಯುವ ಸಂಘಟಕರು ಮತ್ತು ಸಮಾಜ ಸೇವಕರು), ನವೀನ್ ಅಮ್ಮೆಂಬಳ ( ಪರ್ತಕರ್ತರು), ನಾಗೇಶ್ ಕುಲಾಲ್ ( ಕಲಾಕುಂಭ ಸಾಂಸ್ಕೃತಿಕ ವೇದಿಕೆ, ಕುಳಾಯಿ), ಡಾ ರಶ್ಮಿ ಅರುಣ್ ಕುಮಾರ್ ( ಪತ್ರಕರ್ತರು), ಟಿ.ಸಿ.ನಟರಾಜ್ ( ಉಪಾಧ್ಯಕ್ಷರು, ಅಖಿಲ ಭಾರತೀಯ ಪ್ರಜಾಪತಿ ಮಹಾಸಂಘ), ಡಾ. ಶ್ರೀನಿವಾಸನ್ ವೇಲು ( ಹೃದಯ ತಜ್ಞರು, ಅಧ್ಯಕ್ಷರು ಶ್ರೀನಿವಾಸ ಫೌಂಡೇಶನ್) ಇವರಿಗೆ ಕುಲಾಲ ಕೀರಿಟ ಬಿರುದು ನೀಡಿ ಸನ್ಮಾನಿಸಲಾಯಿತು.