ಬೆಂಗಳೂರು: ರಾಮನಗರದ ಜೈಲಿನಲ್ಲಿರುವ ಪಾದರಾಯನಪುರ ಗಲಭೆ ಪ್ರಕರಣದ ಆರೋಪಿಗಳಲ್ಲಿ ಇಬ್ಬರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಈ ಹಿನ್ನೆಲೆ ಆರೋಪಿಗಳನ್ನು ಪೊಲೀಸರು ಬೆಂಗಳೂರಿಗೆ ಸ್ಥಳಾಂತರಿಸಲು ಸಿದ್ಧತೆಗಳನ್ನು ನಡೆಸುತ್ತಿದ್ದಾರೆ. ಇನ್ನು ಈ ವಿಚಾರವಾಗಿ ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆಯೇ ನಾನು ಇದೇ ವಿಷಯವಾಗಿ ಸರ್ಕಾರದ ಗಮನ ಸೆಳೆದರೂ ನಿರ್ಲಕ್ಷಿಸಿದರ ಫಲವಾಗಿ ಇಂದು ರಾಮನಗರಕ್ಕೂ ಕೊರೊನಾ ವೈರಸ್ ವಕ್ಕರಿಸಿದೆ. ಪಾಸಿಟಿವ್ ಬಂದ ಇಬ್ಬರ ಜತೆಯಲ್ಲಿದ್ದ ಏಳೆಂಟು ಮಂದಿಯನ್ನು ಕ್ವಾರಂಟೈನ್ ಗೆ ಕರೆದೊಯ್ಯಲಾಗಿದೆ. ಸರ್ಕಾರ ತಡ ಮಾಡದೆ ರಾಮನಗರ ಜೈಲಿನಲ್ಲಿರುವ ಕೈದಿಗಳನ್ನು ಕೂಡಲೇ ಸ್ಥಳಾಂತರ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನು ಸರ್ಕಾರದ ಅವಿವೇಕದ ನಿರ್ಧಾರದಿಂದಾಗಿ ರಾಮನಗರ ಜಿಲ್ಲೆಯ ಜನ ಭೀತಿಗೊಂಡಿದ್ದಾರೆ. ಇದನ್ನು ಇನ್ನೂ ಸಹಿಸಲು ಸಾಧ್ಯವಿಲ್ಲ. ಸರ್ಕಾರ ತೆಗೆದುಕೊಂಡ ಎಡವಟ್ಟು ನಿರ್ಧಾರದಿಂದ ರಾಮನಗರದಲ್ಲೂ ಸೋಂಕು ಹರಡುವ ಭೀತಿ ಎದುರಾಗಿದೆ ಎಂದು ಹೆಚ್ ಡಿಕೆ ಗರಂ ಆಗಿದ್ದಾರೆ.