ಯಾದಗಿರಿ: ನನ್ನ ಮಗನೇ ಡ್ರಗ್ಸ್ ಮಾಫಿಯಾದಲ್ಲಿದ್ರೂ ಸರ್ಕಾರ ಸುಮ್ಮನೆ ಬಿಡಲ್ಲ ಎಂದು ಸಚಿವ ಪ್ರಭು ಚೌಹಾಣ್ ಹೇಳಿದ್ದಾರೆ.
ಸಚಿವರು ಇಂದು ಯಾದಗಿರಿಯ ಕಡೆಚುರ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿದ್ದರು. ಈ ವೇಳೆ ಡ್ರಗ್ ಮಾಫಿಯಾ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಡ್ರಗ್ಸ್ ಮಾಫಿಯಾ ವಿರುದ್ಧ ಕ್ರಮಕ್ಕೆ ಸರ್ಕಾರ ಬದ್ಧವಿದೆ. ನಮ್ಮ ಸರ್ಕಾರ ಯಾವುದೇ ಕಾರಣಕ್ಕೂ ಪ್ರಕರಣ ಮುಚ್ಚಿ ಹಾಕಲ್ಲ. ತಪ್ಪು ಮಾಡಿದ್ರೆ ನನ್ನನ್ನೂ ಶಿಕ್ಷಿಸಿ ಅಂತಾ ಪ್ರಧಾನಿಗಳು ಹೇಳಿದ್ದಾರೆ. ನಮ್ಮ ಸರ್ಕಾರ ಇರೋದೇ ಹೀಗೆ ಎಂದಿದ್ದಾರೆ.
ಇದೇ ವೇಳೆ ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಮಾತನಾಡಿದ ಅವರು, ಭಾರತ ದೇಶದಲ್ಲಿ ಸಂವಿಧಾನವೇ ಮೊದಲು. ಸಂವಿಧಾನದ ಎದುರು ಯಾರೂ ದೊಡ್ಡವರಲ್ಲ. ಕುಮಾರಸ್ವಾಮಿಯವರಿಗೆ ಕೆಲಸವಿಲ್ಲ, ಅದಕ್ಕೆ ಇಂತಹ ಆರೋಪ ಮಾಡುತ್ತಾರೆ. ಬರೀ ಸುಳ್ಳು ಮಾತನಾಡುತ್ತಾರೇ, ಅವರ ಆರೋಪವೆಲ್ಲಾ ಸುಳ್ಳು ಎಂದು ಹರಿಹಾಯ್ದರು.








