ಕುಮಾರಸ್ವಾಮಿ ಜೆಡಿಎಸ್ ಪಕ್ಷವನ್ನ ಸರ್ವನಾಶ ಮಾಡಲು ಹೊರಟಿದ್ದಾರೆ : ಜಿಟಿಡಿ
ಮೈಸೂರು : ಮೈಸೂರಿನಲ್ಲಿ ಶಕುನಿ, ಮಂಥರೆಯ ಮಾತು ಕೇಳುತ್ತಿರುವ, ಕುಮಾರಸ್ವಾಮಿ ಜೆಡಿಎಸ್ ಅನ್ನು ಸರ್ವನಾಶ ಮಾಡಲು ಹೊರಟಿದ್ದಾರೆ ಎಂದು ಮಾಜಿ ಸಚಿವ ಜಿಟಿ ದೇವೇಗೌಡ ಹೇಳಿದ್ದಾರೆ.
ಜಿ.ಟಿ.ದೇವೇಗೌಡರಿಗೆ ಜೆಡಿಎಸ್ ಬಾಗಿಲು ಮುಚ್ಚಿದೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಜಿಟಿಡಿ, ಮಹಾಭಾರತದಲ್ಲಿ ಶಕುನಿಯಿಂದ ಕೌರವರ ಸಂತತಿ ಸರ್ವ ನಾಶವಾಯಿತು.
ರಾಮಾಯಣದಲ್ಲಿ ಮಂಥರೆಯ ಮಾತು ಕೈಕೇಯಿ ಕೇಳಿದ ಪರಿಣಾಮ ರಾಮ ವನವಾಸಕ್ಕೆ ತೆರಳುವಂತಾಯಿತು.
ಇದೀಗ ಮೈಸೂರಿನಲ್ಲೂ ಶಕುನಿ, ಮಂಥರೆಯ ಮಾತು ಕೇಳುತ್ತಿರುವ, ಕುಮಾರಸ್ವಾಮಿ ಜೆಡಿಎಸ್ ಅನ್ನು ಸರ್ವನಾಶ ಮಾಡಲು ಹೊರಟಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ನಾನು ಈಗಲೂ ಜೆಡಿಎಸ್ ನಲ್ಲೇ ಇದ್ದೀನಿ. ವಿಧಾನಸಭೆಯಲ್ಲೂ ಜೆಡಿಎಸ್ ಶಾಸಕರ ಜೊತೆಯೇ ಕುಳಿತುಕೊಳ್ಳುತ್ತಿದ್ದೇನೆ. ನಾನು ಯಾವಗೂ ಜೆಡಿಎಸ್ ವಿರುದ್ಧವಾಗಿ ಮಾತನಾಡಿಲ್ಲ.
ನಾನು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿಲ್ಲ. ನಾನೇನು ಜೆಡಿಎಸ್ ವಿರುದ್ಧ ಕೆಲಸ ಮಾಡುತ್ತಿಲ್ಲ. ಆದ್ರೆ ಮೈಮುಲ್ ಚುನಾವಣೆಯಲ್ಲಿ ಕುಮಾರಸ್ವಾಮಿ ಜೆಡಿಎಸ್ ಅಭ್ಯರ್ಥಿಗಳ ವಿರುದ್ಧವಾಗಿ ಪ್ರಚಾರ ಮಾಡುತ್ತಿದ್ದಾರೆ.
ಮೈಸೂರಿನ ಹೈಕಮಾಂಡ್ ಮಾತು ಕೇಳಿಕೊಂಡು ಕುಮಾರಸ್ವಾಮಿ ಈ ರೀತಿ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಶಾಸಕ ಸಾ. ರಾ. ಮಹೇಶ್ ವಿರುದ್ಧ ಜಿ.ಟಿ.ದೇವೇಗೌಡ ವಾಗ್ದಾಳಿ ನಡಸಿದ್ದಾರೆ.










