ದೆಹಲಿ To ಬಿಡದಿ ನೇರ ಸವಾಲು – ರೈತರಿಗೆ ಅಭಯ
* ಬಿಡದಿ ಟೌನ್‌ಶಿಪ್ ವಿವಾದಕ್ಕೆ ಎಂಟ್ರಿ ಕೊಟ್ಟ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ.
* ನಮ್ಮ ಕುಟುಂಬ ಮುಗಿಸಲು ಯತ್ನಿಸಿದ ಡಿಕೆಶಿಗೆ ಭಗವಂತನೇ ಶಿಕ್ಷೆ ಕೊಡುತ್ತಾನೆ ಎಂದು ಗುಡುಗು.
* ಹೋಟೆಲ್ ಮಾಲೀಕನಿಗೆ ಬೆದರಿಸಿ, ಯೋಧನ ಮಗಳನ್ನು ಕಿಡ್ನಾಪ್ ಮಾಡಿ ಜಮೀನು ಬರೆಸಿಕೊಂಡ ಗಂಭೀರ ಆರೋಪ.
* ರೈತರಿಗಾಗಿ ಪಾದಯಾತ್ರೆಗೂ ಸಿದ್ಧ, ಒಂದಿಂಚೂ ಭೂಮಿ ಬಿಟ್ಟುಕೊಡುವುದಿಲ್ಲವೆಂದು ರೈತರಿಗೆ ಅಭಯ.
ರಾಮನಗರ:ಬಿಡದಿ ಸಮಗ್ರ ಟೌನ್‌ಶಿಪ್ ಯೋಜನೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯು ಇದೀಗ ರಾಜ್ಯ ರಾಜಕೀಯದ ಇಬ್ಬರು ಪ್ರಬಲ ನಾಯಕರ ನಡುವಿನ ನೇರ ಸಮರವಾಗಿ ಮಾರ್ಪಟ್ಟಿದೆ. ರೈತರ ಹೋರಾಟಕ್ಕೆ ಅಧಿಕೃತವಾಗಿ ಧುಮುಕಿರುವ ಕೇಂದ್ರ ಸಚಿವ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಭೂ ಕಬಳಿಕೆಯಿಂದ ಹಿಡಿದು ಕಿಡ್ನಾಪ್‌ವರೆಗಿನ ಗಂಭೀರ ಆರೋಪಗಳನ್ನು ಮಾಡಿ, ಇಂಚಿಂಚು ಲೆಕ್ಕ ಕೊಡುವಂತೆ ಖಡಕ್ ಸವಾಲು ಹಾಕಿದ್ದಾರೆ.
ಬಿಡದಿಯಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿ ಮಾತನಾಡಿದ ಅವರು, ಡಿಕೆಶಿ ವಿರುದ್ಧ ಅಕ್ಷರಶಃ ವಾಗ್ದಾಳಿ ನಡೆಸಿದರು. “ನಮ್ಮ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ಡಿ.ಕೆ. ಶಿವಕುಮಾರ್ ಏನೆಲ್ಲಾ ಆಟ ಆಡಿದ್ದಾರೆ ಎಂಬುದು ನನಗೆ ಚೆನ್ನಾಗಿ ತಿಳಿದಿದೆ. ಆದರೆ ನಾನು ಭಗವಂತನನ್ನು ನಂಬಿದ್ದೇನೆ, ಆತನೇ ನಿಮಗೆ ತಕ್ಕ ಶಿಕ್ಷೆ ನೀಡುತ್ತಾನೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಳೆಯ ಕಡತ ಬಿಚ್ಚಿಟ್ಟ ಎಚ್‌ಡಿಕೆ
ಟೌನ್‌ಶಿಪ್ ವಿಚಾರದಲ್ಲಿ ತಮ್ಮ ಮೇಲಿದ್ದ ಆರೋಪಗಳನ್ನು ತಳ್ಳಿಹಾಕಿದ ಕುಮಾರಸ್ವಾಮಿ, ಡಿಕೆಶಿ ಅವರ ಹಳೆಯ ವ್ಯವಹಾರಗಳನ್ನು ಒಂದೊಂದಾಗಿ ಬಿಚ್ಚಿಟ್ಟರು. “ಇದೇ ಶಿವಕುಮಾರ್, ಬೆಂಗಳೂರಿನ ಹೊಸಕೆರೆಹಳ್ಳಿ ಮತ್ತು ಸುತ್ತಮುತ್ತ ಎಷ್ಟು ಭೂಮಿಯನ್ನು ಲಪಟಾಯಿಸಿದ್ದಾರೆ? ಬ್ರಾಹ್ಮಣರಾದ ಕೃಷ್ಣಮೂರ್ತಿ ಎಂಬುವವರು ಸಾಲ ಮಾಡಿ ಹೋಟೆಲ್ ನಡೆಸುತ್ತಿದ್ದರು. ಅವರ ಹೋಟೆಲ್‌ಅನ್ನು ಅಗ್ಗದ ಬೆಲೆಗೆ ಖರೀದಿಸಿ, ಅವರನ್ನು ಖಾಲಿ ಮಾಡಿಸಿ ಅದೇ ಜಾಗದಲ್ಲಿ ಇಂದು ಶಾಲೆ ಕಟ್ಟಿಕೊಂಡಿದ್ದಾರೆ. ಅಷ್ಟೇ ಅಲ್ಲ, ಸೇನೆಯಿಂದ ನಿವೃತ್ತರಾಗಿ ಬಂದಿದ್ದ ರಾಮಸ್ವಾಮಿ ಎಂಬುವವರ ಮಗಳನ್ನು ಅಪಹರಿಸಿ, ಹೆದರಿಸಿ ಅವರಿಂದ ಜಮೀನು ಬರೆಸಿಕೊಂಡಿದ್ದಾರೆ. ಇಂತಹ ವ್ಯಕ್ತಿಗಳಿಗೆ ನನ್ನ ಮತ್ತು ದೇವೇಗೌಡರ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ?” ಎಂದು ಪ್ರಶ್ನಿಸಿದರು.
ರೈತರಿಗೆ ಅನ್ಯಾಯ ಮಾಡಲು ಬಿಡುವುದಿಲ್ಲ
ತಮ್ಮ ಆಡಳಿತಾವಧಿಯಲ್ಲಿ ರೈತರನ್ನು ಒಕ್ಕಲೆಬ್ಬಿಸುವ ಯಾವುದೇ ಉದ್ದೇಶ ತಮಗಿರಲಿಲ್ಲ ಎಂದು ಸ್ಪಷ್ಟಪಡಿಸಿದ ಎಚ್‌ಡಿಕೆ, “ನಾನು 2006ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ 60 ಸಾವಿರ ಕೋಟಿ ಬಂಡವಾಳ ಹೂಡಿಕೆಯೊಂದಿಗೆ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಬಯಸಿದ್ದೆ. ಯೋಜನೆಯ 9 ಸಾವಿರ ಎಕರೆಯಲ್ಲಿ ಸುಮಾರು 4 ಸಾವಿರ ಎಕರೆ ಸರ್ಕಾರಿ ಭೂಮಿ ಇದೆ ಎಂಬ ಮಾಹಿತಿ ಇತ್ತು. ಆದರೆ ಈಗ ಕೇವಲ 700 ಎಕರೆ ಇದೆ ಎಂದು ತೋರಿಸುತ್ತಿದ್ದಾರೆ. ಉಳಿದ ಭೂಮಿಯನ್ನು ಅಧಿಕಾರಿಗಳ ಜೊತೆ ಸೇರಿ ಲೂಟಿ ಹೊಡೆಯಲಾಗಿದೆ” ಎಂದು ಗಂಭೀರ ಆರೋಪ ಮಾಡಿದರು.
“ನನ್ನನ್ನು ಬೆಳೆಸಿದ ರೈತ ಸಮುದಾಯಕ್ಕೆ ನನ್ನ ಕೊನೆ ಉಸಿರು ಇರುವವರೆಗೂ ಅನ್ಯಾಯವಾಗಲು ಬಿಡುವುದಿಲ್ಲ. ನಿಮ್ಮ ಒಂದಿಂಚು ಭೂಮಿಯನ್ನೂ ಯಾರೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ನನ್ನ ಮಗ ನಿಖಿಲ್ ನಿಮ್ಮ ಪರವಾಗಿ ದನಿ ಎತ್ತಿದ್ದಾನೆ, ಅವನಿಗೆ ನನ್ನ ಸಂಪೂರ್ಣ ಬೆಂಬಲವಿದೆ. ಒಂದುವೇಳೆ ಬೆಂಗಳೂರಿಗೆ ಪಾದಯಾತ್ರೆ ಮಾಡುವ ಸಂದರ್ಭ ಬಂದರೆ, ನನ್ನ ಆರೋಗ್ಯವನ್ನೂ ಲೆಕ್ಕಿಸದೆ ನಾನೇ ಮುಂದೆ ನಿಂತು ನಿಮ್ಮ ಜೊತೆ ಹೆಜ್ಜೆ ಹಾಕುತ್ತೇನೆ. ನನ್ನ ಮೇಲೆ ನಂಬಿಕೆ ಇಡಿ,” ಎಂದು ರೈತರಿಗೆ ಧೈರ್ಯ ತುಂಬಿದರು.
ಬಿಡದಿ ಟೌನ್‌ಶಿಪ್ ವಿವಾದವು ಕುಮಾರಸ್ವಾಮಿ ಮತ್ತು ಶಿವಕುಮಾರ್ ನಡುವಿನ ವೈಯಕ್ತಿಕ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದ್ದು, ಮುಂದಿನ ದಿನಗಳಲ್ಲಿ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಸುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.








