ಮೈಸೂರು : ಮೈತ್ರಿ ಸರ್ಕಾರ ಪತನವಾಗಲು ಸಿದ್ದೌಷಧ ಕಾರಣ ಎಂಬ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆಗೆ ಮಾಜಿ ಸಚಿವ ಹೆಚ್. ವಿಶ್ವನಾಥ್ ಪ್ರತಿಕ್ರಿಯೆ ನೀಡಿದ್ದು, ಕುಮಾರಸ್ವಾಮಿ ಹೇಳಿದ್ದು ಅರ್ಧ ಸತ್ಯ ಎಂದಿದ್ದಾರೆ.
ಇಂದು ಹೆಚ್ ವಿಶ್ವನಾಥ್ ಅವರು ಸಂಸದ ಶ್ರೀನಿವಾಸ ಪ್ರಸಾದ್ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾಂಗ್ರೆಸ್ ಕಾರಣ ಎಂದು ಕುಮಾರಸ್ವಾಮಿ ಅರ್ಧ ಸತ್ಯ ಹೇಳಿದ್ದಾರೆ. ಪೂರ್ತಿ ಸತ್ಯ ಹೇಳುತ್ತಿಲ್ಲ. ಪೂರ್ತಿ ಸತ್ಯ ಹೇಳಲಿ ಎಂದು ಹೆಚ್.ವಿಶ್ವನಾಥ್ ಒತ್ತಾಯಿಸಿದರು
ಇದೇ ವೇಳೆ ಕೊರೊನಾ ಕಿಟ್ ಖರೀದಿಯಲ್ಲಿ ರಾಜ್ಯ ಸರ್ಕಾರ 2 ಸಾವಿರ ಕೋಟಿ ಅವ್ಯವಹಾರ ನಡೆಸಿದೆ ಎಂಬ ಸಿದ್ದರಾಮಯ್ಯ ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ವಿಶ್ವನಾಥ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೊರೊನಾ ವಿಚಾರದಲ್ಲಿ ಬೀದಿಯಲ್ಲಿ ನಿಂತು ಲೆಕ್ಕ ಕೇಳುವುದು ಸರಿಯಲ್ಲ. ಸಂಸದೀಯ ವ್ಯವಸ್ಥೆಯಲ್ಲಿ ರೀತಿ -ರಿವಾಜುಗಳಿವೆ. ಅದನ್ನು ಎಲ್ಲಿ ಕೇಳಬೇಕೋ ಅಲ್ಲಿ ಕೇಳಬೇಕು. ಅದಕೋಸ್ಕರ ಪಬ್ಲಿಕ್ ಅಕೌಂಟ್ಸ್ ಕಮಿಟಿ ಇದೆ. ಜೊತೆಗೆ ಅಸೆಂಬ್ಲಿ ಶುರುವಾಗಲಿದ್ದು, ಅಲ್ಲಿ ಲೆಕ್ಕ ಕೇಳಿದರೆ ಕೊಡುತ್ತಾರೆ. ಬೀದಿಯಲ್ಲಿ ನಿಂತು ಗ್ರಾಮ ಪಂಚಾಯತ್ ಸದಸ್ಯನೂ ಕೂಡ ಈತರಹ ಲೆಕ್ಕ ಕೇಳುವುದಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.








