ಕುಂಬ್ಳೆ, ಹರ್ಭಜನ್ ದಾಖಲೆ ಚಿಂದಿ ಉಡಾಯಿಸಿದ ಅಶ್ವಿನ್ Ashwin saaksha tv
ಮುಂಬೈನಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಆಲ್ ರೌಂಡರ್ ರವಿಚಂದ್ರನ್ ಅಶ್ವಿನ್ ಅವರ ವಿಕೆಟ್ ಗಳ ಬೇಟೆ ಮುಂದುವರೆದಿದೆ.
ಮೊದಲ ಇನ್ನಿಂಗ್ಸ್ ನಲ್ಲಿ ನಾಲ್ಕು ವಿಕೆಟ್ ಪಡೆದಿದ್ದ ಅಶ್ವಿನ್, ಇದೀಗ ದ್ವಿತೀಯ ಇನ್ನಿಂಸ್ ನಲ್ಲಿ ಮೂರು ವಿಕೆಟ್ ಪಡೆದು ಕಿವೀಸ್ ಗೆ ಮುಳುವಾಗಿದ್ದಾರೆ.
ಈ ಮಧ್ಯೆ ಅಶ್ವಿನ್ ಈ ಪಂದ್ಯದಲ್ಲಿ ವಿಲ್ ಯಂಗ್ ವಿಕೆಟ್ ಪಡೆಯುವ ಮೂಲಕ ದಾಖಲೆಯೊಂದನ್ನು ಬರೆದಿದ್ದಾರೆ.
2ನೇ ಟೆಸ್ಟ್ ನಲ್ಲಿ ರವಿಚಂದ್ರನ್ ಅಶ್ವಿನ್ ಕ್ಯಾಲೆಂಡರ್ ವರ್ಷದಲ್ಲಿ 50ಕ್ಕೂ ಹೆಚ್ಚು ವಿಕೆಟ್ ಗಳನ್ನು ಹೆಚ್ಚು ಬಾರಿ ಪಡೆದ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಕಿವೀಸ್ ನ ಎರಡನೇ ಇನ್ನಿಂಗ್ಸ್ ನಲ್ಲಿ ಅಶ್ವಿನ್, ಕಿವೀಸ್ ಓಪನರ್ ವಿಲ್ ಯಂಗ್ ವಿಕೆಟ್ ಪಡೆದರು. ಆ ಮೂಲಕ 2021ರಲ್ಲಿ 50 ವಿಕೆಟ್ ಪೂರ್ಣಗೊಳಿಸಿದರು.
ಇದಕ್ಕೂ ಮುನ್ನ 2015, 2016, 2017ರಲ್ಲಿ 50+ ವಿಕೆಟ್ ಪಡೆದಿದ್ದರು. ಈ ವರ್ಷ ಸೇರಿದಂತೆ ಅಶ್ವಿನ್ ವೃತ್ತಿ ಜೀವನದಲ್ಲಿ 4 ವರ್ಷ 50+ ವಿಕೆಟ್ ಪಡೆದ ಏಕೈಕ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಅಶ್ವಿನ್ ಗೂ ಮುನ್ನ ಲೆಗ್ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ, (1999, 2004, 2006) ಮೂರು ಬಾರಿ ಮತ್ತು ಹರ್ಭಜನ್ ಸಿಂಗ್(2001, 2002, 2008) ಮೂರು ಬಾರಿ ಕ್ಯಾಲೆಂಡರ್ ವರ್ಷದಲ್ಲಿ 50ಕ್ಕಿಂತ ಹೆಚ್ಚು ವಿಕೆಟ್ ಪಡೆದಿದ್ದರು.









