ಕುಂದಾಪುರ : ಜಿಲ್ಲೆಯಲ್ಲಿ ಭಾರಿ ಮಳೆ ಆಗುತ್ತಿದ್ದು, ರಾಷ್ಟ್ರೀಯ ಹೆದ್ದಾರಿ 66 ರ ಬಸ್ರೂರು ಮೂರು ಕೈನಿಂದ ಟಿಟಿ ರಸ್ತೆ ಕಡೆಗೆ ಸಂಚರಿಸುವ ವಿನಾಯಕ -ಕೋಡಿ ಜಂಕ್ಷನ್‌ವರೆಗೆ ನೀರು ರಸ್ತೆಯಲ್ಲಿಯೇ ನಿಂತು ಕೆರೆಯಂತಾಗಿದೆ. ಈ ವಿಚಾರವಾಗಿ ಸ್ಥಳೀಯರು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇಂದು ಕುಂದಾಪುರದಲ್ಲಿ ಕಾರ್ಯಕ್ರಮ ಮುಗಿಸಿ ಉಡುಪಿ ಕಡೆಗೆ ತೆರಳುತ್ತಿದ್ದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಕಾರು ಬಸ್ರೂರು ಮೂರು ಕೈ ಮಾರ್ಗವಾಗಿ ಬರುತ್ತಿದ್ದರು. ಈ ವೇಳೆ ಹೆದ್ದಾರಿ ಹೋರಾಟ ಸಮಿತಿ, ರಿಕ್ಷಾ ಚಾಲಕರು, ಸ್ಥಳೀಯ ಅಂಗಡಿ ಮಾಲಕರು ಹೆದ್ದಾರಿಯ ಅವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸಚಿವರ ಕಾರು ಅಡ್ಡಗಟ್ಟಿ ಸಮಸ್ಯೆಯನ್ನು ಶೀಘ್ರ ಪರಿಹರಿಸುವಂತೆ ಒತ್ತಾಯಿಸಿದರು. ಈ ವೇಳೆ ಸಚಿವರು ಸಕರಾತ್ಮಕವಾಗಿ ಸ್ಪಂದಿಸದ ಹಿನ್ನೆಲೆಯಲ್ಲಿ ಹೋರಾಟ ಸಮಿತಿ ಪದಾಧಿಕಾರಿಗಳು ಹಾಗೂ ಸಚಿವರ ಮಧ್ಯೆ ವಾಗ್ವಾದ ಕೂಡ ನಡೆಯಿತು.
ಈ ವೇಳೆ ಎಚ್ಚೆತ್ತುಕೊಂಡ ಸಚಿವರು, ಡಿಸಿಗೆ ಕರೆ ಮಾಡಿ ಸಮಸ್ಯೆಯನ್ನು ಶೀಘ್ರ ಪರಿಹರಿಸುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ಹೆದ್ದಾರಿ ಹೋರಾಟ ಸಮಿತಿಯ ಪ್ರಮುಖರಾದ ಕಿಶೋರ್ ಕುಮಾರ್, ರಾಜೇಶ್ ಕಾವೇರಿ, ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ, ಶಶಿಧರ ಹೆಮ್ಮಾಡಿ, ಗಣೇಶ್ ಮೆಂಡನ್, ರಿಕ್ಷಾ ಚಾಲಕ ಸತೀಶ್ ಪ್ರಭು, ಸ್ಥಳೀಯ ರಿಕ್ಷಾ ಚಾಲಕರು, ಅಂಗಡಿ ಮಾಲಿಕರು, ಸಾರ್ವಜನಿಕರು ಉಪಸ್ಥಿತರಿದ್ದರು.