ನನ್ನ ಜೀವನದಲ್ಲಿ ಪ್ರಭಾವ ಬೀರಿದ ಕುವೆಂಪುರವರ ಕವನಗಳು Kuvempu poems
ಶಾಲಾ ದಿನಗಳಲ್ಲಿ ಕುವೆಂಪು ಎಂಬ ಹೆಸರು ಕೇಳಿದಾಗ ಏನೋ ಒಂದು ಪುಳಕ.ಕುವೆಂಪು ಆ ಹೆಸರಲ್ಲೇ ಇದೆ ಏನೋ ಕಂಪು. ಇದು ಕನ್ನಡದ ಕಂಪು.ಕನ್ನಡ ಸಾಹಿತ್ಯದ ಕಂಪು. Kuvempu poems
“ಮನೆಮನೆ ಮುದ್ದು ಮನೆ
ಮನೆಮನೆ ನನ್ನ ಮನೆ
ತಾಯಿ ಮುತ್ತು ಕೊಟ್ಟ ಮನೆ
ತಂದೆ ಪೆಟ್ಟು ಕೊಟ್ಟ ಮನೆ” ಎಂಬ ಒಂದು ಆಪ್ತವಾದ ಕಲ್ಪನೆಯನ್ನು ಮನದಲ್ಲಿ ಹುಟ್ಟು ಹಾಕಿದ ಸುಂದರವಾದ ಕವನದ ಕರ್ತೃರಾದ ಕುವೆಂಪುರವರ ಕವನದ ಬಗ್ಗೆ ಬಾಲ್ಯದಿಂದಲೂ ಏನೋ ಸೆಳೆತ.
“ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ” ಕನ್ನಡದ ಹೃದಯ ಕನ್ನಡಕ್ಕಾಗಿ ಮಿಡಿಯಬೇಕು ಎಂಬ ಸಂದೇಶದಿಂದ ಕನ್ನಡದತ್ತ ಸೆಳೆದು “ಜಯ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ” ಎಂಬಲ್ಲಿ ಕರ್ನಾಟಕದ ಸುಂದರ ಪ್ರಕೃತಿಯ ದರುಶನ ಮಾಡಿಸಿ ಮನದಲ್ಲಿ ನಮ್ಮ ನಾಡಿನ ಬಗ್ಗೆ ಅಭಿಮಾನ,ಭಕ್ತಿಯನ್ನು ಹುಟ್ಟು ಹಾಕಿದ ಕವನಗಳು ಎಂದೆಂದಿಗೂ ತಮ್ಮ ಅಳಿಸಲಾಗದ ಛಾಪನ್ನು ಮನದಾಳದಲ್ಲಿ ಒತ್ತಿವೆ.
ವಿಶ್ವ ಮಾನವ ಸಂದೇಶವನ್ನು ಸಾರಿದ ಕವನ ಇಡೀ ಮಾನವ ಕುಲವೇ ಒಂದು. ಜಾತಿ ಮತ ಭೇದಗಳನ್ನು ತೊರೆದು ವಿಶ್ವ ಮಾನವರಾಗೋಣಾ ಅನ್ನುತ್ತಾ ಸಮರಸ ಭಾವದಿಂದ ಬಾಳುವ ಪಥವನ್ನು ಸೂಚಿಸಿದ ಕವನ.
ನಾ ನಿನಗೆ ನೀ ನನಗೆ ಜೇನಾಗುವ
ರಸದೇವ ಗಂಗೆಯಲಿ ಮೀನಾಗುವ ಹೂವಾಗುವ ಹಣ್ಣಾಗುವ ಪ್ರತಿರೂಪಿ ಭಗವತಿಗೆ ಮುಡಿಪಾಗುವ
ರಸ ಋಷಿಯ ಈ ಕವನ ಓದುತ್ತಾ ,ಕೇಳುತ್ತಾ,ಗುನುಗುತ್ತಾ ಕಳೆದ ದಿನಗಳು ಅದೆಷ್ಟು ಚೆಂದ. ಪದಗಳಿಂದಲೇ ಮನದಲ್ಲಿ ನೂರೊಂದು ಭಾವನೆಗಳನ್ನು ಎಬ್ಬಿಸಿದ ಸುಂದರ ಸಾಹಿತ್ಯವಿದು.
ವಯಸ್ಸಿನ ನಾಗಾಲೋಟದ ಪಯಣದಲ್ಲಿ ಬದಲಾಗುವ ಮನಸ್ಥಿತಿಯಲ್ಲಿ ಮಾಗಿದ ಮನಕ್ಕೆ ಇಷ್ಟವಾದ ಕವನ,ಆಧ್ಯಾತ್ಮಿಕ ಚಿಂತನೆಯನ್ನು ಮನದಲ್ಲಿ ಹುಟ್ಟುಹಾಕುವ
ಅಗಣಿತ ತಾರಾಗಣಗಳ ನಡುವೆ.
ಅಗಣಿತ ತಾರಾಗಣಗಳ ನಡುವೆ
ನಿನ್ನನ್ನೇ ನೆಚ್ಚಿಹೆ ನಾನು
ನನ್ನ ಜೀವನ ಸಮುದ್ರಯಾನಕ್ಕೆ
ಚಿರ ಧೃವತಾರೆಯೂ ನೀನು
ಇಲ್ಲದ ಸಲ್ಲದ ತೀರಗಳೆಡೆಗೆ ನಾ
ತೊಳಲುತ ಬಳಲಿಹೆನು
ದಿಟ್ಟಿಯ ನಿನ್ನೆಡೆ ನೆಟ್ಟಿರೆ
ಕಡೆಗೆ ಗುರಿಯನು ಸೇರೆನೆ ನಾನು
ಚಂಚಲವಾದ ತಾರೆಗಳಲ್ಲಿ
ನಿಶ್ಚಲನೆಂದರೆ ನೀನೇ
ಮಿಂಚಿ ಮುಳುಗುತಿಹ ನಶ್ವರದೆದೆಯಲ್ಲಿ
ಶಾಶ್ವತನೆಂದರೆ ನೀನೇ
_ ಕುವೆಂಪು
(ಅಗ್ನಿ ಹಂಸ ಕವನಸಂಕಲನದಿಂದ)
ಹುಟ್ಟು ಸಾವಿನ ನಡುವಿನ ಜೀವನ ಪಯಣವು ಒಂದು ಸಮುದ್ರ ಯಾನದಂತೆ.ತಿಳಿಯಾದ ನೀರಿನ ಮೇಲೆ ಸರಾಗವಾಗಿ ಸಾಗುತ್ತಿರುವಾಗ ಹಿಮಬಂಡೆಗಳು,ಅಪಾಯಕಾರಿ ಅಲೆಗಳು ಅಥವಾ ಯಾವುದೇ ಜಲಚರಗಳಿಂದಲೂ ಅಪಾಯ ಕಟ್ಟಿಟ್ಟ ಬುತ್ತಿ.ಅಗಾಧವಾಗಿ ವ್ಯಾಪಿಸಿರುವ ವಾರಿಧಿಯಲ್ಲಿ ಕವಿದ ಅಂಧಕಾರದಲ್ಲಿ ದಾರಿ ತೋರುವುದು ಕೇವಲ ಧ್ರುವತಾರೆ.ಲೆಕ್ಕಕ್ಕೆ ಸಿಗದಷ್ಟು ನಕ್ಷತ್ರಗಳು ಆಗಸದಲ್ಲಿದ್ದರೂ ,ಭರವಸೆಯ ಬೆಳಕನ್ನು ಧ್ರುವತಾರೆಯಷ್ಟೇ ನೀಡಲು ಸಾಧ್ಯ. ಅದೇ ರೀತಿ ನಮ್ಮ ಸುತ್ತಲೂ ಇರುವ ಬಂಧು ಬಳಗದ ನೆಂಟರು ಎಂಬ ಸ್ವಾರ್ಥದ ಜೀವನದಲ್ಲಿ ಬೆಳಕು ತುಂಬಿ ಮುನ್ನಡೆಸುವವನು ಸರ್ವಶಕ್ತನಾದ ಭಗವಂತನೊಬ್ಬನೆ.ಹಾಗಾಗಿ ನಿನ್ನನ್ನೆ ನಂಬಿರುವೆ ಅನ್ನುತ್ತಾರೆ ಕವಿ.”ತೇನವಿನಾ ತೃಣಮಪಿ ನ ಚಲತಿ“ಅನ್ನುವಾಗ ಆತನೇ ತಾನೇ ನಮಗಾಧಾರ.
ಮನಸ್ಸೆಂಬ ಮರ್ಕಟವು ಜೀವನದ ಅನೇಕ ಆಕರ್ಷಣೆ ಗಳತ್ತ ಹರಿದು ಅಲ್ಲೋಲಕಲ್ಲೋಲ ವಾಗುವ ಸಂಭವವೇ ಹೆಚ್ಚು.ಇದರಿಂದ ಗಮ್ಯವನ್ನು ತಲುಪದೇ ಅಲೆಯುವಂತಹ ಪಯಣವಾಗುತ್ತದೆ.ಹಾಗಾಗಿ ನಮ್ಮ ದೃಷ್ಟಿಯನ್ನು ಆ ಭಗವಂತನಲ್ಲಿ ಸ್ಥಿರವಾಗಿಸಿ ನೇರವಾಗಿ ನಡೆದರೆ ಸಫಲತೆ ಸಾಧ್ಯ.ಧೃಡಸಂಕಲ್ಪ ಹೊಂದಿದ ಗುರಿಯು ನಮ್ಮದಾಗಿದ್ದರೆ ಬದುಕು ಅರ್ಥಪೂರ್ಣ ವಾಗಿರುವುದು ಎಂಬುದನ್ನು ಕವಿ ತಿಳಿಸಿದ್ದಾರೆ.
ಆಗಸದಲ್ಲಿ ಮಿಂಚಿ ಮಿನುಗುವ ನಕ್ಷತ್ರ ಪುಂಜಗಳು ಅಧಿಕವಾಗಿವೆ.ಆದರೂ ಅವುಗಳ ಹೊಳಪು ಧ್ರುವತಾರೆ ಯ ಮುಂದೆ ಮಸುಕಾಗಿದೆ.ಚಂಚಲತೆಯಿಲ್ಲದ ಸ್ಥಿರಬೆಳಕು ನೀಡುವ ಧ್ರುವತಾರೆಯೆಂದರೆ ಅದು ಆ ಭಗವಂತ.ಈ ನಶ್ವರ ಜಗತ್ತಿನಲ್ಲಿ ಶಾಶ್ವತವೆಂಬುದು ಕೇವಲ ಭಗವಂತನ ಅಸ್ತಿತ್ವವೊಂದೇ.
ಎಲ್ಲವೂ ಅವನಿಚ್ಛೆ ಎಂಬುದು ಧೃಡವಾದ ನಂಬಿಕೆಯಾಗಿರುವಾಗ ಅದನ್ನು ಇನ್ನಷ್ಟು ಬಲಗೊಳಿಸುವ ಶಕ್ತಿಯನ್ನು ಈ ಕವನ ನೀಡಿದೆ.
ವಸುಧಾ ಶೆಣೈ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಫ್ಲೂ ನಿಂದ ದೂರವಿರಲು 8 ಸೂಪರ್ ಪವರ್ಫುಲ್ ಆಹಾರಗಳು https://t.co/SeuQxOPseK
— Saaksha TV (@SaakshaTv) November 24, 2020
ಆಧಾರ್ ಮತ್ತು ಪ್ಯಾನ್ ಕಾರ್ಡ್ ನಲ್ಲಿ ಹೆಸರು ಭಿನ್ನವಾಗಿದೆಯೇ? ಸರಿಪಡಿಸಿಕೊಳ್ಳಲು ಇಲ್ಲಿದೆ ಮಾಹಿತಿ https://t.co/8llnlACZ8K
— Saaksha TV (@SaakshaTv) November 24, 2020