ಐಪಿಎಲ್ 2020- ಆರು ಸೋಲು.. ಮೂರು ಗೆಲುವಿನೊಂದಿಗೆ ರಾಹುಲ್ ಗಳಿಸಿದ್ದ ರನ್ 525
ಕೊನೆಗೂ ಸತತ ಸೋಲುಗಳಿಂದ ಕಂಗೆಟ್ಟಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ರೋಚಕ ಜಯ ದಾಖಲಿಸುವಲ್ಲಿ ಸಫಲವಾಯ್ತು.
ಹಾಗೇ ನೋಡಿದ್ರೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಈ ಬಾರಿಯ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನವನ್ನು ನೀಡಿದೆ.
ಕೆಲವೊಂದು ತಪ್ಪುಗಳಿಂದ ಮತ್ತು ಅದೃಷ್ಟ ಕೈಕೊಟ್ಟ ಕಾರಣ ಸತತ ಸೋಲು ಅನುಭವಿಸಬೇಕಾಯ್ತು.
ಮುಂಬೈ ಇಂಡಿಯನ್ಸ್ ವಿರುದ್ಧದ ಎರಡನೇ ಸೂಪರ್ ಓವರ್ ನಲ್ಲಿ ದಾಖಲಿಸಿದ್ದ ಗೆಲುವು ಕಿಂಗ್ಸ್ ಇಲೆವೆನ್ ತಂಡದ ಆಟಗಾರರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.
ಅದ್ರಲ್ಲೂ ಮಹಮ್ಮದ್ ಶಮಿ ಅವರು ಸೂಪರ್ ಓವರ್ ನಲ್ಲಿ ಮಾರಕ ಬೌಲಿಂಗ್ ಪ್ರದರ್ಶನ ನೀಡಿದ್ದರು.
ಇನ್ನೊಂದೆಡೆ ಮುಂಬೈ ಇಂಡಿಯನ್ಸ್ ತಂಡದ ಪರ ಜಸ್ಪ್ರಿತ್ ಬೂಮ್ರಾ ಕೂಡ ಅತ್ಯುತ್ತಮ ಪ್ರದರ್ಶನವನ್ನೇ ನೀಡಿದ್ದರು.
ಹೀಗಾಗಿ ಇಬ್ಬರು ಬೌಲರ್ ಗಳ ಪರಾಕ್ರಮದಿಂದಾಗಿ ಸೂಪರ್ ಓವರ್ ಕೂಡ ಟೈ ಆಗುವಂತೆ ಮಾಡಿತ್ತು.
ಕೊನೆಗೂ ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್ ಮತ್ತು ಮಯಾಂಕ್ ಅಗರ್ವಾಲ್ ಅವರ ಬ್ಯಾಟಿಂಗ್ ನಿಂದ ಕಿಂಗ್ಸ್ ಇಲೆವೆನ್ ತಂಡ ಗೆಲುವಿನ ನಗೆ ಬೀರಿತ್ತು.
ಈ ನಡುವೆ, ಕೆ.ಎಲ್. ರಾಹುಲ್ ಅವರು ಸತತ ಸೋಲಿನ ನಡುವೆಯೂ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು.
ಈ ಬಾರಿಯ ಐಪಿಎಲ್ ನಲ್ಲಿ 500 ರನ್ ದಾಖಲಿಸಿದ್ದ ಮೊದಲ ಆಟಗಾರನಾಗಿ ರಾಹುಲ್ ಹೊರ ಹೊಮ್ಮಿದ್ರು.
9 ಪಂದ್ಯಗಳನ್ನು ಆಡಿರುವ ಕೆ.ಎಲ್. ರಾಹುಲ್ 525 ರನ್ ದಾಖಲಿಸಿದ್ದಾರೆ. ಇದ್ರಲ್ಲಿ ಒಂದು ಭರ್ಜರಿ ಶತಕ ಕೂಡ ಇದೆ. ಸರಾಸರಿ 75ರಂತೆ ರನ್ ಕಲೆ ಹಾಕಿದ್ದಾರೆ.
ಹಾಗೇ ಎರಡನೇ ಸ್ಥಾನವನ್ನು ಕೂಡ ಪಡೆದುಕೊಂಡಿದ್ದು ಕಿಂಗ್ಸ್ ಇಲೆವೆನ್ ತಂಡದ ಮತ್ತೊಬ್ಬ ಆರಂಭಿಕ ಮಯಾಂಕ್ ಅಗರ್ ವಾಲ್.
ಮಯಾಂಕ್ ಅಗರ್ ವಾಲ್ ಅವರು 43ರ ಸರಾಸರಿಯಲ್ಲಿ 393 ರನ್ ಸಿಡಿಸಿದ್ದಾರೆ.
ಇನ್ನು ಮೂರನೇ ಸ್ಥಾನ ಫಾಫ್ ಡು ಪ್ಲೇಸಸ್ ಮತ್ತು ನಾಲ್ಕನೇ ಸ್ಥಾನ ಶಿಖರ್ ಧವನ್ ಹಾಗೂ ಐದನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಇದ್ದಾರೆ.
ಇನ್ನೊಂದೆಡೆ ಬೌಲಿಂಗ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮಾರಕ ಬೌಲರ್ ಕಾಗಿಸೊ ರಬಾಡ ಅಗ್ರ ಸ್ಥಾನದಲ್ಲಿದ್ದಾರೆ.
ರಬಾಡ ಅವರು 19 ವಿಕೆಟ್ ಕಬಳಿಸಿದ್ರೆ, ಜಸ್ಪ್ರಿತ್ ಬೂಮ್ರಾ 15 ವಿಕೆಟ್ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ.
ಇನ್ನು ಮಹಮ್ಮದ್ ಶಮಿ 14 ವಿಕೆಟ್ ಹಾಗೂ ಯುಜುವೇಂದ್ರ ಚಾಹಲ್ 13 ವಿಕೆಟ್ ಮತ್ತು ಜೋಫ್ರಾ ಆರ್ಚೆರ್ ಅವರು 12 ವಿಕೆಟ್ ಉರುಳಿಸಿದ್ದಾರೆ.