ಶಿವಮೊಗ್ಗ: ಕಾಡಾನೆ ದಾಳಿಗೆ (Elephant Attack) ಕೃಷಿ ಕಾರ್ಮಿಕರೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಘಟನೆ ಶಿವಮೊಗ್ಗ (Shivamogga) ನಗರ ಹತ್ತಿರದ ಆಲದೇವರ ಹೊಸೂರು ಹತ್ತಿರ ಸಂಭವಿಸಿದೆ. ಹನುಮಂತಪ್ಪ ಆನೆ ದಾಳಿಗೆ ಬಲಿಯಾಗಿರುವ ಕಾರ್ಮಿಕ ಎನ್ನಲಾಗಿದೆ.
ಹನುಮಂತಪ್ಪ ತಮ್ಮ ಜಮೀನಿಗೆ ಹೋಗಿ ಮರಳಿ ಮನೆಗೆ ಬರುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ಡಿಎಫ್ ಒ ಪ್ರಸನ್ನ ಕೃಷ್ಣ ಪಟಗಾರ್, ತೋಟಕ್ಕೆ ಕೂಲಿ ಕೆಲಸಕ್ಕೆ ಹೋಗಿ ಮರಳಿ ಮನೆಗೆ ಬರುತ್ತಿದ್ದ ಸಂದರ್ಭದಲ್ಲಿ ಆನೆ ದಾಳಿ ನಡೆಸಿದೆ ಎಂಬುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಹೇಳಿದ್ದಾರೆ.
ಹನುಮಂತಪ್ಪ ಅವರು ಸಂಪತ್ ಕುಮಾರ್ ಎಂಬುವವರ ತೋಟದ ಮನೆಯಲ್ಲಿ ವಾಸವಾಗಿದ್ದರು. ಆಶ್ಫಾಕ್ ಅಹಮದ್ ಖಾನ್ ಎಂಬುವವರ ತೋಟದಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಕಾರ್ಮಿಕ ಹನುಮಂತಪ್ಪ ಮೂಲತಃ ಗದಗ ಜಿಲ್ಲೆಯ ಲಕ್ಷ್ಮೇಶ್ವರದವರಾಗಿದ್ದು, ಪತ್ನಿ, ನಾಲ್ವರು ಮಕ್ಕಳು ಇದ್ದಾರೆ ಎನ್ನಲಾಗಿದೆ.








