ರಾಮಲಲ್ಲಾ ಮಂದಿರದ ಭೂಮಿಪೂಜೆಗೆ ಆಹ್ವಾನ ನೀಡದ ಕೃತಘ್ನ ಬಿಜೆಪಿ ತನ್ನ ಕೋಟೆ ಕಟ್ಟಿದ ಸರದಾರರಿಗೆ ಅವಮಾನ ಮಾಡಿತಾ!
“ಜಹಾ ರಾಮ್ ಕಾ ಜನ್ಮ ಹುವಾ ತಾ
ಮಂದಿರ್ ವಹೀ ಬನಾಯೇಂಗೇ“
ಭಾರತೀಯ ಜನತಾ ಪಕ್ಷಕ್ಕೆ ದೇಶದ್ಯಂತ ಅಡಿಗಲ್ಲು ಹಾಕಿಕೊಟ್ಟಿದ್ದು ಇದೇ ಘೋಷಣೆ. ರಾಮಚಂದ್ರಪ್ರಭುವಿನ ಹೆಸರಿನಲ್ಲಿ ಹಿಂದುತ್ವದ ಅಜೆಂಡಾದಡಿ ಕೇಸರಿ ಕೋಟೆ ಕಟ್ಟಿದ ಉಕ್ಕಿನ ಮನುಷ್ಯ, ಸೋಮನಾಥ ಪುರದಿಂದ ಹೊರಡಿಸಿಕೊಂಡು ಬಂದಿದ್ದ ಲೋಕರಥಯಾತ್ರೆಯಲ್ಲಿ ಹೊರಡಿದ ಈ ಘೋಷಣೆಯೇ ಭವಿಷ್ಯದಲ್ಲಿ ಬಿಜೆಪಿಗೆ ದೇಶಾದ್ಯಂತ ಲೋಕತಂತ್ರದ ಅಧಿಕಾರ ತಂದುಕೊಟ್ಟಿತು. ಅತ್ತ ರಾಮಜನ್ಮ ಭೂಮಿ ರಥಯಾತ್ರೆ ರಾಜ್ಯ ರಾಜ್ಯಗಳನ್ನು ಸಂಚರಿಸುತ್ತಾ ಮುನ್ನಡೆಯುತ್ತಿದ್ರೆ ಇತ್ತ ಬಿಜೆಪಿ ಮತ್ತು ಸಂಘಪರಿವಾರ ಒಂದೊಂದಾಗಿ ರಾಜ್ಯಗಳಲ್ಲಿ ಶಕ್ತಿ ಕೇಂದ್ರಗಳ ಆಕ್ರಮಣಕ್ಕೆ ನೀಲನಕ್ಷೆ ಹಾಕಿಕೊಳ್ಳುತ್ತಿತ್ತು. ಆದರೆ ಬಿಜೆಪಿಯ ದೊಡ್ಡ ಗುರಿ ಇದ್ದಿದ್ದು ದಿಲ್ಲಿಯ ಗದ್ದುಗೆ. ರಾಮಜನ್ಮಭೂಮಿ ರಥಯಾತ್ರೆಯ ಸಂಪೂರ್ಣ ಉದ್ದೇಶ ಫಲಿಸಿದರೆ ದೆಹಲಿ ಸಿಂಹಾಸನ ತಮ್ಮದಾಗುತ್ತದೆ ಎನ್ನುವ ನಿಖರ ಮತ್ತು ಸ್ಪಷ್ಟ ಆಲೋಚನೆ ಸಂಘಪರಿವಾರಕ್ಕೂ ಇತ್ತು. ಇವತ್ತು ಪ್ರಬಲವಾಗಿ ನಿಂತಿರುವ ಭಾರತೀಯ ಜನತಾ ಪಕ್ಷದ ಕೋಟೆಯ ತಳಪಾಯವೇ ಈ ರಾಮಜನ್ಮಭೂಮಿ ರಥಯಾತ್ರೆ. ಇದನ್ನು ರೂಪಿಸಿದ ಲೋಹದ ಪ್ರತಿಮೆಯೇ ಲಾಲ್ ಕೃಷ್ಣ ಆಡ್ವಾಣಿ.
ಕಾಲಚಕ್ರ ಒಂದು ಸುತ್ತು ತಿರುಗಿದೆ. ಈಗ ನಾಳೆ ಆಗಸ್ಟ್ 5 ಕ್ಕೆ ರಾಮಲಲ್ಲಾನ ಮಂದಿರದ ಭೂಮಿ ಪೂಜೆಗೆ ಮಹೂರ್ತ ನಿಗದಿಯಾಗಿದೆ. ಅಯೋದ್ಯೆಯ ಸರಯೂ ನದಿತಟದಲ್ಲಿ ರಾಮಚಂದ್ರಪ್ರಭುವಿನ ಮಂದಿರ ನಿರ್ಮಿಸಲು ಸುಪ್ರಿಂ ಕೋರ್ಟ್ ಅಂತಿಮ ತೀರ್ಪು ನೀಡಿ ವಿವಾದ ಕೊನೆಗೊಳಿಸಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವೂ ರಾಮಮಂದಿರದ ಭವ್ಯ ಭವನದ ನೀಲನಕ್ಷೆ ತಯಾರಿಸಿದೆ. ದೇಶದ ಪವಿತ್ರ ನದಿಗಳು, ಪುಣ್ಯ ಸ್ಥಾನಗಳ ಮೃತ್ತಿಕೆಗಳನ್ನು ಬಳಸಿ ರಾಮಜನ್ಮಭೂಮಿಯಲ್ಲಿ ಭೂಮಿಪೂಜೆ ನೆರವೇರಲಿದೆ. ಇಷ್ಟಕ್ಕೆಲ್ಲಾ ಕಾರಣರಾದ ಲೋಹದ ಮನುಷ್ಯ ಮಾತ್ರ ತನ್ನ ಮನೆಯಲ್ಲಿ ಚಡಪಡಿಸುತ್ತಾ ಹಳೆಯ ದಿನಗಳನ್ನು ನೆನಪು ಹಾಕಿಕೊಳ್ಳುತ್ತಾ ಮೌನದಿಂದ ಒಳಗೊಳಗೆ ನೋಯುತ್ತಾ ಬೇಯುತ್ತಾ ಕೂತಿದ್ದಾರೆ.
ಯಾವ ರಾಮಜನ್ಮಭೂಮಿ ರಥಯಾತ್ರೆಗೆ ತನ್ನಾಪ್ತ ಗೆಳೆಯ ಅಟಲ್ ಬಿಹಾರಿ ವಾಜಪೇಯಿಯವರ ಅಸಮ್ಮತಿಯನ್ನು ಬದಿಗಿಟ್ಟು ರಥ ನಡೆಸಿದರೂ ಅದೇ ಆಡ್ವಾಣಿ ಈಗ ಭೂಮಿಪೂಜೆಯಲ್ಲಿ ಭಾಗಿಯಾಗುತ್ತಿಲ್ಲ. ರಥಯಾತ್ರೆಯ ರೂವಾರಿಗಳಾದ ಮರುಳಿ ಮನೋಹರ್ ಜೋಶಿ, ಉಮಾಭಾರತಿ ಯಾರೂ ಸಹ ಇದರಲ್ಲಿ ಪಾಲ್ಗೊಳ್ಳುತ್ತಿಲ್ಲ. ಅಶೋಕ್ ಸಿಂಘಾಲ್ ರ ನೆನಪೂ ಪ್ರಾಯಶಃ ಈ ಕಾರ್ಯಕ್ರಮದ ಆಯೋಜಕರಿಗೆ ಇದ್ದಂತಿಲ್ಲ.
ಬಾಬ್ರಿ ಮಸೀದಿ ಪತನದ ನಂತರ ನಡೆದ ಅಮಾನುಷ ಗೋದ್ರಾ ಮತ್ತು ಉಳಿದ ಹತ್ಯಾಕಾಂಡದಲ್ಲಿ ರಾಜಧರ್ಮ ಪಾಲಿಸಿ ರಾಜೀನಾಮೆ ಕೊಟ್ಟು ನಡೆಯಿರಿ ಎಂದು ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಗುಜರಾತ್ ನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರಿಗೆ ಸೂಚನೆ ಕೊಟ್ಟಿದ್ದರು. ಆದರೆ ಆಗ ತನ್ನ ಶಿಷ್ಯ ಮೋದಿಯವರ ಬೆನ್ನಿಗೆ ನಿಂತು ರಕ್ಷಣೆ ಮಾಡಿದ ಇದೇ ಆಡ್ವಾಣಿಯವರನ್ನು ಅದೇ ಶಿಷ್ಯ ಮೂಲೆಗುಂಪು ಮಾಡಿದ್ದಾರೆ. ಬಿಜೆಪಿ ಕಟ್ಟಿದ ಎಲ್ಲಾ ನಾಯಕರ ಪರಿಸ್ಥಿತಿಯೂ ಹೀಗೇ ಇದೇ. ಮುರುಳಿ ಮನೋಹರ್ ಜೋಶಿ, ಜಸ್ವಂತ್ ಸಿಂಗ್, ಯಶ್ವಂತ್ ಸಿನ್ಹಾ, ಉಮಾ ಭಾರತಿ, ಮನೇಕಾ ಗಾಂಧಿ, ಪಟ್ಟಿ ದೊಡ್ಡದಿದೆ. ಆರೋಗ್ಯ ಸರಿ ಇಲ್ಲದ ಕಾರಣ ವಾಜಪೇಯಿ ಮತ್ತು ಜಾರ್ಜ್ ಫರ್ನಾಂಡೀಸ್ ಮರ್ಯಾದೆ ಗೌರವ ಉಳಿಸಿಕೊಂಡರಷ್ಟೆ. ಇಲ್ಲದಿದ್ದರೇ ಅವರನ್ನೂ ಹೀಗೆ ನಿರ್ಲಕ್ಷಿಸಿ ದೂರವಿಡಲಾಗುತ್ತಿತ್ತು.
ಅಷ್ಟಕ್ಕೂ ನಾಳೆ ವೇದಿಕೆಯಲ್ಲಿ ಕೂರುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಆರ್ ಎಸ್ ಎಸ್ ಪ್ರಮುಖ ಮೋಹನ್ ಭಾಗವತ್ ಹಾಗೂ ಉಳಿದವರಿಗೆ ರಾಮಜನ್ಮಭೂಮಿ ಕಾರ್ಯಕ್ರಮದಲ್ಲಿ ಭಾಗಿಯಾಗುವ ಯಾವ ಸಾಮರ್ಥ್ಯ ಹಾಗೂ ಯೋಗ್ಯತೆ ಇದೆ. ಹೀಗಂತ ಈಗ ಹೇಳುತ್ತಿರುವುದು ಬೇರಾರು ಅಲ್ಲ ಬಿಜೆಪಿಯ ರೆಬೆಲ್ ನಾಯಕ ಸುಬ್ರಹ್ಮಣ್ಯ ಸ್ವಾಮಿ. ಆಡ್ವಾಣಿ, ಜೋಶಿಯಂತಹ ನಾಯಕರು ಕಟ್ಟಿದ ಸಾಮ್ರಾಜ್ಯದಲ್ಲಿ ಅನಾಯಾಸವಾಗಿ ಸಿಂಹಾಸನ ಏರಿದವರು ನರೇಂದ್ರ ಮೋದಿ. ಬಿಜೆಪಿಯ ಮೊದಲ ತಲೆಮಾರಿನ ನಾಯಕರನ್ನು ತೀರಾ ಈ ಮಟ್ಟಕ್ಕೆ ಮೂಲೆಗುಂಪು ಮಾಡುವ ಔಚಿತ್ಯವೇನು? ತೀರಾ ಮೊನ್ನೆ ಮೊನ್ನೆಯವರೆಗೂ ಆಡ್ವಾಣಿ ಬಾಬ್ರಿ ಮಸೀದಿ ವಿವಾದಕ್ಕೆ ಸಂಬಂಧ ಪಟ್ಟಂತೆ ವಿಚಾರಣೆ ಎದುರಿಸಿ 100 ಪ್ರಶ್ನೆಗಳನ್ನು ಕೇಳಲ್ಪಟ್ಟಿದ್ದಾರೆ. ಕಳೆದ ನಾಲ್ಕುವರೆ ವರ್ಷಗಳಿಂದ ಅವರ ವಿಚಾರಣೆಯಲ್ಲಿ ಬರೋಬ್ಬರಿ ಸಾವಿರಕ್ಕೂ ಅಧಿಕ ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ಅವರ ವಕೀಲರು ಹೇಳುತ್ತಾರೆ. ಉಮಾ ಭಾರತಿ, ಕಲ್ಯಾಣ್ ಸಿಂಗ್, ಮುರಳಿ ಮನೋಹರ್ ಜೋಶಿಯವರೂ ನ್ಯಾಯಾಂಗದ ವಿಚಾರಣೆ ಎದುರಿಸುತ್ತಲೇ ಇದ್ದಾರೆ. ಆದರೆ ಒಬ್ಬ ರಾಮನ ಮಂದಿರ ಕಟ್ಟಲು ತಮ್ಮ ಜೀವನವನ್ನೇ ನರಕ ಮಾಡಿಕೊಂಡ ಆಡ್ವಾಣಿ ಮುಂತಾದ ನಾಯಕರನ್ನು ಭೂಮಿಪೂಜೆಗೆ ಕರೆಯದೇ ಇರುವುದರ ಅರ್ಥ ಇನ್ನೇನು?
ರಾಮನ ಅಸ್ಮಿತೆಯನ್ನೇ ಪ್ರಶ್ನಿಸಿದ ಕಾಂಗ್ರೆಸ್ ಗೆ ರಾಮನ ಭೂಮಿ ಪೂಜೆ ಯಾಕೆ ಬೇಕು ಎಂದು ಬಿಜೆಪಿಯ ಮಂಕು ಕವಿದ ಭಕ್ತರು ಪ್ರಶ್ನಿಸುತ್ತಿದ್ದಾರೆ. ಪ್ರಾಯಶಃ ಕೆಲವು ಸಂಗತಿಗಳು ಅವರಿಗೆ ಗೊತ್ತಿಲ್ಲ ಅಥವಾ ಗೊತ್ತಿದ್ದರೂ ಹೇಳುವುದಿಲ್ಲ. ರಾಮಜನ್ಮಭೂಮಿ ಅಯೋಧ್ಯೆಯ ಭೂಮಿ ಪೂಜೆ ಬಿಜೆಪಿಯ ಪಕ್ಷದ ಕಾರ್ಯಕ್ರಮವಲ್ಲ ಅದು ರಾಷ್ಟ್ರೀಯ ಕಾರ್ಯಕ್ರಮವಾಗುತ್ತದೆ. ಕಾಂಗ್ರೆಸ್ ಸೇರಿದಂತೆ ಎಲ್ಲಾ ವಿರೋಧ ಪಕ್ಷಗಳಿಗೂ ಆಹ್ವಾನ ನೀಡಬೇಕಿರುವುದು ಒಂದು ಶಿಷ್ಟಾಚಾರ. ಕೇಂದ್ರ ಸರ್ಕಾರದ ಪ್ರೊಟೋಕಾಲ್ ವ್ಯವಸ್ಥೆ ಮೋದಿ ಕೇಂದ್ರಿತವಾದ ಕಾರಣ ನಾವೀಗ ಇಂತಹ ಶಿಷ್ಟಾಚಾರವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ತನ್ನ ರಾಜಕೀಯ ಗುರುವನ್ನೇ ಮರೆತ ಶಿಷ್ಯ ವಿರೋಧ ಪಕ್ಷಗಳನ್ನು ಆಹ್ವಾನಿಸುತ್ತಾರೆ ಅನ್ನುವುದು ದೂರದ ಮಾತು. ಆದ್ರೆ ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ದಶಕಗಳ ಕಾಲ ಅಯೋದ್ಯೆಯಲ್ಲಿ ನಿಂತು ಹೋಗಿದ್ದ ರಾಮಲಲ್ಲಾ ಪೂಜೆ, ಭಜನೆ ಮತ್ತು ಪ್ರಾರ್ಥನೆಗೆ ಹಿಂದೂಗಳಿಗೆ ಅವಕಾಶ ನೀಡಲಾಯ್ತು. ಹೀಗಿದ್ದರೆ ರಾಜೀವ್ ಗಾಂಧಿ ರಾಮನ ಅಸ್ಮಿತೆಯನ್ನು ನಂಬಲಿಲ್ಲವೇ? ಪಿ.ವಿ ನರಸಿಂಹ ರಾವ್ ಮತ್ತು ಚಂದ್ರಶೇಖರ್ ಸರ್ಕಾರಗಳು ಸಹ ರಾಮಜನ್ಮ ಭೂಮಿ ವಿವಾದ ಬಗೆ ಹರಿಸಲು ಪ್ರಯತ್ನ ಮಾಡಿದ್ದವು. ಪಿ.ವಿ ನರಸಿಂಹ ರಾವ್ ಮತ್ತು ರಾಜೀವ್ ಗಾಂಧಿ ಇಬ್ಬರೂ ಕಾಂಗ್ರೆಸ್ ಪ್ರಧಾನಿಗಳೆ ಅಲ್ಲವೇ?
ನಮ್ಮ ವೀರಪ್ಪ ಮೋಯಿಲಿ ರಾಮಾಯಣ ಮಹಾನ್ವೇಷಣಂ ಎನ್ನುವ ದೊಡ್ಡ ಗ್ರಂಥವನ್ನೇ ಬರೆದರು. ಅವರು ಕಾಂಗ್ರೆಸ್ಸಿಗರಲ್ಲವೇ? ಇಂತಹ ಸಣ್ಣ ಪುಟ್ಟ ಕಾರಣಗಳಾದರೂ ಸಾಕಿತ್ತಲ್ಲವೇ ಅವರಿಗೊಂದು ಆಹ್ವಾನ ಕೊಡಲು. ಅಷ್ಟಕ್ಕೂ ರಾಮಮಂದಿರವನ್ನು ಬಿಜೆಪಿಯೇನು ಗುತ್ತಿಗೆ ಪಡೆದುಕೊಂಡಿದೆಯೇ? ಕಾಂಗ್ರೆಸ್ ನಲ್ಲಿ ಮತ್ತು ಇತರ ವಿರೋಧ ಪಕ್ಷಗಳಲ್ಲಿ ರಾಮಭಕ್ತ ಅನುಯಾಯಿಗಳಿಲ್ಲವೇ? ನಾಳಿನ ಭೂಮಿ ಪೂಜೆಯಲ್ಲಿ ತನ್ನ ಅಗತ್ಯ ಶಿಷ್ಟಾಚಾರ ಮರೆತ ಪ್ರಧಾನಿ ಮೋದಿ ನಿರ್ದೇಶಿತ ಪ್ರಧಾನಿ ಸಚಿವಾಲಯ ಈ ದೇಶ ಮುಂದೆ ಯಾವ ದಿಕ್ಕಿನಲ್ಲಿ ಸಾಗುತ್ತದೆ ಎನ್ನುವ ಸೂಚನೆಯನ್ನು ಕೊಟ್ಟಿದೆ ಅಷ್ಟೆ. ಅರ್ಥ ಮಾಡಿಕೊಳ್ಳುವುದು ಬಿಡುವುದು ನಿಮಗೆ ಬಿಟ್ಟಿದ್ದು.
-ವಿಭಾ (ವಿಶ್ವಾಸ್ ಭಾರದ್ವಾಜ್)